ಮಥುರಾ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಉಪಯುಕ್ತ ಉತ್ಪನ್ನಗಳಾಗಿ ಮರುಬಳಕೆ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಲು ಮುಂದಾಗಿದೆ ಮಥುರಾ.
ಪೆಪ್ಸಿಕೋ ಇಂಡಿಯಾವು ಯುನೈಟೆಡ್ ವೇ ದೆಹಲಿಯ ಪಾಲುದಾರಿಕೆಯೊಂದಿಗೆ ಆರಂಭಿಸಿದ ಉಪಕ್ರಮವು ಸ್ಥಳೀಯರಿಗೆ ತಮ್ಮ ಪರಿಸರವನ್ನು ಸ್ವಚ್ಛವಾಗಿಡಲು ವಿವಿಧ ಸಮುದಾಯಗಳ ಸದಸ್ಯರಿಗೆ ಸ್ಫೂರ್ತಿ ನೀಡುತ್ತದೆ. ಅಲ್ಲದೇ ಇದು ಸ್ಥಳೀಯ ಸಮುದಾಯವನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
`ಮರುಬಳಕೆಯ ತ್ಯಾಜ್ಯ ಪ್ಲಾಸ್ಟಿಕ್‍ನಿಂದ ಬೆಂಚುಗಳು ಮತ್ತು ಕುರ್ಚಿಗಳನ್ನು ಸಿದ್ಧಪಡಿಸುವುದು ಒಂದು ಉತ್ತಮ ಉಪಕ್ರಮವಾಗಿದೆ’ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಹೇಳಿದ್ದಾರೆ.
ಉಪಕ್ರಮದ ಅಡಿಯಲ್ಲಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಸಲುವಾಗಿ 400 ಕ್ಕೂ ಹೆಚ್ಚು ಅಂಗಡಿಗಳಿಗೆ ನಿಯಮಿತವಾಗಿ ಭೇಟಿ ನೀಡಲು ಮೀಸಲು ಮೊಬೈಲ್ ವ್ಯಾನ್ ಅನ್ನು ನಿಯೋಜಿಸಲಾಗಿದೆ ಎಂದು ಪೆಪ್ಸಿಕೋ ಸಾರ್ವಜನಿಕ ನೀತಿ ಮತ್ತು ಸರ್ಕಾರಿ ವ್ಯವಹಾರಗಳ ಸಹಾಯಕ ನಿರ್ದೇಶಕ ರಾಹುಲ್ ಶರ್ಮಾ ಹೇಳಿದ್ದಾರೆ.
ಕಾರ್ಯಕ್ರಮದ ಅಡಿಯಲ್ಲಿ, ಮಥುರಾ ಮತ್ತು ಬೃಂದಾವನದಾದ್ಯಂತ 20 ಕಿ.ಮೀಗಳಷ್ಟು ವ್ಯಾಪಿಸಿರುವ ಎಂಟು ವಾಣಿಜ್ಯ ವಲಯಗಳಲ್ಲಿ ಸಂಘಟಿತ ಮತ್ತು ಅಸಂಘಟಿತ ಚಿಲ್ಲರೆ ಅಂಗಡಿಗಳು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಕಡೆಗೆ ಗಮನ ನೀಡುವುದನ್ನು ಉತ್ತೇಜಿಸಲಾಗುತ್ತಿದೆ.