ಯಲ್ಲಾಪುರ: ಭಾರತೀಯ ಪರಂಪರೆಯಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದಲೂ ಗುರುವಿಗೆ ಮಹತ್ವದ ಸ್ಥಾನವಿದೆ. ಮಕ್ಕಳಲ್ಲಿ ರಾಷ್ಟ್ರಭಕ್ತಿ, ಸದ್ಗುಣ, ವಾತ್ಸಲ್ಯ, ಗುರುಭಕ್ತಿ ಎಲ್ಲವನ್ನು ರೂಡಿಸುವ ಹೊಣೆಗಾರಿಗೆ ಶಿಕ್ಷಕರ ಮೇಲಿದೆ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ಅವರು ಹೇಳಿದರು.
ಅವರು ಮಂಗಳವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಭಾಗವಹಿಸಿ ಆಶೀರ್ವಚನ ನೀಡಿದರು.
ಮೊದಲಿನಿಂದಲೂ ಭಾರತ ಗುರು ಪೂರ್ಣಿಮೆಯ ಮೂಲಕ ಗುರುವನ್ನು ಆರಾಧಿಸುತ್ತ ಬಂದಿದೆ. ಸ್ವಾತಂತ್ರ್ಯ ನಂತರ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಜ್ಞಾನದಾಹಿ ಸಮಾಜಕ್ಕೆ ಭಾರತ ಒತ್ತು ಕೊಟ್ಟಿದೆ. ಭಾರತೀಯ ಪರಂಪರೆಯಲ್ಲಿ ಪ್ರತಿ ಹಂತದಲ್ಲಿಯೂ ಜ್ಞಾನದ ಬಗ್ಗೆ ಹೇಳಲಾಗಿದೆ. ಮಹಾ ಭಾರತ, ಮನುಸ್ಮೃತಿಯಲ್ಲಿ ಸಹ ಗುರುವಿನ ಮಹತ್ವ ಸಾರಲಾಗಿದೆ ಎಂದು ಹೇಳಿದರು. ಸಾಮಾನ್ಯ ವಿದ್ಯಾರ್ಥಿಯನ್ನು ಅಸಾಮಾನ್ಯ ವಿದ್ಯಾರ್ಥಿಯನ್ನಾಗಿ ರೂಪಿಸುವವರು ಅಸಾಮಾನ್ಯ ಶಿಕ್ಷಕರಾಗುತ್ತಾರೆ. ದೇಶ ಕಾಯುವ ಸೈನಿಕರು, ಸರ್ಕಾರ ನಡೆಸುವವರು ಸಹ ಶಿಕ್ಷಕರ ಶಿಷ್ಯರಾಗಿದ್ದಾರೆ. ಹೀಗಾಗಿ ರಾಷ್ಟ್ರ ನಿರ್ಮಾಣ ಶಕ್ತಿ ಪರಿಪೂರ್ಣವಾಗಿ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ಸಮರ್ಥರಾಗಿದ್ದರೆ ಮಾತ್ರ ಶಿಕ್ಷಣವನ್ನು ರಕ್ಷಿಸಬಲ್ಲರು ಎಂದು ಅಭಿಪ್ರಾಯಪಟ್ಟರು.
ಮಕ್ಕಳಿಗೆ ಪವೀತ್ರವಾದ ಜ್ಞಾನ ಸಂಪಾದನೆಯಲ್ಲಿ ಸಂತೃಪ್ತಿ ಪಡಿಸಬೇಕಾದ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಅದು ಅರಳಲು ಪೆÇ್ರೀತ್ಸಾಹ, ಮಾರ್ಗದರ್ಶಕ ನೀಡಬೇಕು. ಖಾಸಗಿ ಜೀವನವನ್ನು ಮೀರಿ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳಲ್ಲಿನ ಕೀಳರಿಮೆ ದೂರ ಮಾಡಿ ಆತ್ಮ ಗೌರವ ಬೆಳಸಲು ಶಿಕ್ಷಕರು ಪ್ರಯತ್ನಿಸಬೇಕು. ಶಿಕ್ಷಕರಿಗೆ ಜ್ಞಾನದ ದೃಷ್ಟಿಯಲ್ಲಿ ಎಂದಿಗೂ ನಿವೃತ್ತಿಯಿಲ್ಲ ಎಂದರು. ರಾಷ್ಟ್ರವನ್ನು ಉತ್ತಮ ರೀತಿಯಲ್ಲಿ ನಿರ್ಮಿಸಲು ಹೊಸ ಶಿಕ್ಷಣ ಪದ್ದತಿ ಬಂದಿದೆ. ಶಿಕ್ಷಕರ ಅಭಿಪ್ರಾಯ ಪಡೆದು ಈ ನೀತಿ ಜಾರಿಗೆ ತರಲಾಗಿದೆ. ಹೀಗಾಗಿ ನೈತಿಕತೆಯಿಂದ ಕೂಡಿದ ಶಿಕ್ಷಣ ದೇಶಕ್ಕೆ ಬರಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ತಾಲೂಕಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕಿ ಪ್ರೇಮಾ ಗಾಂವ್ಕರ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ನಿವೃತ್ತ ಉಪನ್ಯಾಸಕರಾದ ಎಂ.ಎನ್ ಹೆಗಡೆ ಅವರು ಭಾಗವಹಿಸಿದ್ದರು. ಉಪನ್ಯಾಸಕರಾದ ಡಾ. ಡಿ.ಕೆ ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಇತರರು ಕಾರ್ಯಕ್ರಮದಲ್ಲಿ ಇದ್ದರು. ಅನಿತಾ ನಾಯ್ಕ ಸ್ವಾಗತಿಸಿದರು. ಪಲ್ಲವಿ ಕೋಮಾರ್ ಪ್ರಾರ್ಥಿಸಿದರು. ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನದ ಡಾ. ಕವಿತಾ ಹೆಬ್ಬಾರ್ ನಿರ್ವಹಿಸಿದರು.