ಕಾರವಾರ: 75ನೇ ಸ್ವಾತಂತ್ರ್ಯ ವರ್ಷದ ಹಿನ್ನೆಲೆಯಲ್ಲಿ ‘ಆಜಾದಿ ಕಾ ಅಮೃತ ಮಹೋತ್ಸವ’ ಹಾಗೂ ಪಾಕ್ ವಿರುದ್ಧ ಯುದ್ಧದಲ್ಲಿ ಗೆಲುವು ಸಾಧಿಸಿ 50 ವರ್ಷ ಸಂದ ಹಿನ್ನೆಲೆಯಲ್ಲಿ ‘ಸ್ವರ್ಣಿಮ್ ವಿಜಯ್ ಅಭಿಯಾನ’ದ ಅಂಗವಾಗಿ ಭಾರತೀಯ ನೌಕಾಪಡೆಯು ಬೈಕ್ ಮೆರವಣಿಗೆ ಆಯೋಜಿಸಿದ್ದು, ಕಾರವಾರದಿಂದ ಚಾಲನೆ ನೀಡಲಾಗಿದೆ.
ಡಿಸೆಂಬರ್ 1971ರಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಸೈನ್ಯದ ಮೇಲೆ ನಿರ್ಣಾಯಕ ಮತ್ತು ಐತಿಹಾಸಿಕ ವಿಜಯವನ್ನು ಪಡೆದುಕೊಂಡವು. ಇದು ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಯಿತು ಮತ್ತು ವಿಶ್ವಯುದ್ಧ 2ರ ನಂತರ ಅತಿದೊಡ್ಡ ಮಿಲಿಟರಿ ಶರಣಾಗತಿಗೆ ಕಾರಣವಾಯಿತು. 2020ರ ಡಿಸೆಂಬರ್ 16ರಿಂದ ರಾಷ್ಟ್ರವು ಭಾರತ- ಪಾಕ್ ಯುದ್ಧದ ಗೆಲುವಿನ 50 ವರ್ಷಗಳ ಸಂಭ್ರಮಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದನ್ನು ‘ಸ್ವರ್ಣಿಮ್ ವಿಜಯ್ ವರ್ಷ್’ ಎಂದೂ ಕರೆಯಲಾಗುತ್ತದೆ
ಇದರ ಅಂಗವಾಗಿ ರಾಷ್ಟ್ರಾದ್ಯಂತ ವಿವಿಧ ಸ್ಮರಣೀಯ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿದ್ದು, ಇದರ ಭಾಗವಾಗಿಯೇ ಈ ‘ಸ್ವರ್ಣಿಮ್ ವಿಜಯ್ ಅಭಿಯಾನ’ ಬೈಕ್ ಮೆರವಣಿಗೆ ಆರಂಭವಾಗಿದೆ.
ಐಎನ್‍ಎಸ್ ವಿಕ್ರಮಾದಿತ್ಯದ ಮೇಲೆ ಚಾಲನೆ: ಈ ಬೈಕ್ ಮೆರವಣಿಗೆಗೆ ಕಾರವಾರದ ಐಎನ್‍ಎಸ್ ಕದಂಬ ನೌಕಾನೆಲೆಯಲ್ಲಿರುವ ಭಾರತೀಯ ನೌಕಾಸೇನೆಯ ಯುದ್ಧ ವಿಮಾನ ವಾಹಕ ನೌಕೆ ‘ಐಎನ್‍ಎಸ್ ವಿಕ್ರಮಾದಿತ್ಯ’ದ ಮೇಲೆ ಚಾಲನೆ ನೀಡಲಾಗಿದೆ. ಈ ಮೆರವಣಿಗೆ ಅಕ್ಟೋಬರ್ 21ಕ್ಕೆ ನವದೆಹಲಿ ತಲುಪುವ ಸಾಧ್ಯತೆ ಇದೆ.
ಕಾಕತಾಳೀಯ ಎಂಬಂತೆ ಈ ಬೈಕ್ ಮೆರವಣಿಗೆಯು ನೌಕಾ- ವಾಯುಪಡೆಗೆ ‘ರಾಷ್ಟ್ರಪತಿ ಬಣ್ಣ’ ನೀಡುವ ದಿನವೇ ಚಾಲನೆ ದೊರೆತಿದೆ. ಈ ಮೆರವಣಿಗೆಯ ವಿವಿಧ ಹಂತಗಳಲ್ಲಿ 50ಕ್ಕೂ ಹೆಚ್ಚು ನೌಕಾ ಸಿಬ್ಬಂದಿ, 11 ದ್ವಿಚಕ್ರ ವಾಹನಗಳು ಮತ್ತು ಎರಡು ಬೆಂಬಲ ವಾಹನಗಳ ಮೂಲಕ 6000 ಕಿ.ಮೀ. ದೂರವನ್ನು ಕಾರವಾರದಿಂದ ನವದೆಹಲಿಯವರೆಗೆ ಕ್ರಮಿಸಲಿದ್ದಾರೆ.