ಯಲ್ಲಾಪುರ: ತಾಲೂಕಿನ ವಿವಿಧೆಡೆ ಕೋವಿಡ್ ಭಯದ ನಡುವೆಯೇ ಗಣೇಶ ಹಬ್ಬದ ತಯಾರಿ ನಡೆಯುತ್ತಿದೆ.
ಇಲ್ಲಿನ ವಜ್ರಳ್ಳಿಯ ಯುವ ಕಲಾಕಾರ ಸತೀಶ ಮಹಾಲೆ ಕಳೆದ ಒಂದೂವರೆ ತಿಂಗಳಿಂದ ಹಗಲು ರಾತ್ರಿ ಶ್ರಮಪಟ್ಟು ವಾರ್ಷಿಕವಾಗಿ ಚೌತಿಹಬ್ಬಕೆ ಭಕ್ತರ ಬೇಡಿಕೆಗನುಗುಣವಾಗಿ ಗಣೇಶ ಮೂರ್ತಿ ತಯಾರಿಸುವಲ್ಲಿ ನಿರತರಾಗಿದ್ದಾರೆ. ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮಣ್ಣಿನ ಮೂರ್ತಿಗಳು ಬಣ್ಣಗಳಿಂದ ಅಂತಿಮ ಸ್ಪರ್ಶ ಪಡೆಯುತ್ತಿದೆ.
ಬಿಕಾಂ ಪದವೀಧರನಾದ ವಜ್ರಳ್ಳಿಯ ಸತೀಶ ಮಹಾಲೆ ಪರಂಪರೆಯಿಂದ ಬಂದ ಈ ಮೂರ್ತಿ ತಯಾರಿಸುವ ಕೈಚಳಕಕ್ಕೆ ಬಾಲ್ಯದಿಂದಲೇ ತೊಡಗಿ ಈಗ ಮೂರು ದಶಕಗಳೇ ಸಂದಿವೆ. ಮಹಾಲೆ ಕುಟುಂಬವು ಗಣೇಶ ಮೂರ್ತಿ ತಯಾರಿಸುವಲ್ಲಿ ಎತ್ತಿದ ಕೈ. ಅಪ್ಪ ಸದಾನಂದ ಮಹಾಲೆ ಕೂಡಾ ಗಣೇಶ ನ ಮಣ್ಣಿನ ಮೂರ್ತಿ ತಯಾರಿಸುತ್ತಿದ್ದರು.
ತೇಲಂಗಾರ, ಬಾಸಲ್ ಭಾಗದಿಂದ ಜೇಡಿಮಣ್ಣು ತಂದು ಹದಗೊಳಿಸಿ ಗಣೇಶನ ಮೂರ್ತಿಗೆ ರೂಪ ನಿಡುತ್ತಾರೆ. ಬಣ್ಣಗಳ ಬೆಲೆ ಏರಿದಾಗಲೂ ಸ್ಥಳೀಯರಿಂದ ಮೂರ್ತಿಗಳಿಗೆ ಹೆಚ್ಚಿನ ದರ ವಿಧಿಸದೇ ಕಡಿಮೆ ಬೆಲೆಯಲ್ಲಿ ಮೂರ್ತಿ ತಯಾರಿಸಿ ಕೊಡುತ್ತಾರೆ. ವಜ್ರಳ್ಳಿಯ ಗೆಳೆಯರ ಬಳಗ ಆಚರಿಸುವ ಪ್ರತಿವರ್ಷದ ಗಜಾನೋತ್ಸವಕೆ ಎತ್ತರದ ಸಾರ್ವಜನಿಕ ಮೂರ್ತಿಯನ್ನು ತಯಾರಿಸಿ ಕೊಡುತ್ತಾರೆ.
ಕಲೆಯ ಮೇಲಿನ ಅತೀವ ಆಸಕ್ತಿಯಿಂದ ಈ ಕೆಲಸದಲ್ಲಿ ತಿಂಗಳುಗಳ ಕಾಲ ಶ್ರಮವಹಿಸುತ್ತೇನೆ ಎನ್ನುವ ಸತೀಶ ಮಹಾಲೆ ಸಿಮೆಂಟ್ ಮೂರ್ತಿಗಳನ್ನು ಮಾಡುವಲ್ಲಿ ಸಿದ್ದಹಸ್ತರು. ಆಧುನಿಕತೆಯ ಒತ್ತಡಗಳಲ್ಲಿ ಕಳೆದು ಹೋಗುವ ಯುವ ಸಮುದಾಯದ ನಡುವೆ ಸತೀಶ ಮಹಾಲೆಯ ಕಲಾ ಕೌಶಲ್ಯ ಮೆಚ್ಚುವಂತಹದ್ದು.