ಶಿರಸಿ: ಅಜಿತ ಮನೋಚೇತನಾ ಸಂಸ್ಥೆಯಲ್ಲಿ ಸೆ.4 ರಂದು ಸೆಲ್ಕೊ ಸಂಸ್ಥೆಯವರು ಪ್ರಾಯೋಜಿಸಿ ನಿರ್ಮಿಸಿರುವ ಕಿರು ಸೌರವಿದ್ಯುತ್ ಉತ್ಪಾದನಾ ಘಟಕವನ್ನು ವಿಕಾಸ ವಿಶೇಷ ಶಾಲೆಯ ಮಕ್ಕಳು ಉದ್ಘಾಟಿಸಿದರು.
ಅಜಿತಮನೋಚೇತನಾ ಶಿಕ್ಷಕಿಯರಾದ ಸುಮಿತ್ರಾ, ಗೀತಾ, ಪರಿಮಳಾ, ಶ್ಯಾಮಲಾ ಅವರು ಪ್ರಾರ್ಥನೆ ನಡೆಸಿಕೊಟ್ಟರು. ಸಂಸ್ಥೆಯ ಅಧ್ಯಕ್ಷ ಸುಧೀರ ಭಟ್ ಸ್ವಾಗತಿಸಿ ಸೆಲ್ಕೊ ಸೋಲಾರ್ ಸೇವೆಗೆ ಅಭಿನಂದನೆ ಹೇಳಿದರು.
ಸೆಲ್ಕೊದ ದತ್ತಾತ್ರಯ ಅವರು ಸೌರಶಕ್ತಿ ಬಳಕೆ ಕುರಿತು ಪವರ್ ಪಾಯಿಂಟ್ ಮಂಡಿಸಿದರು. ಈ ಸಂದರ್ಭದಲ್ಲಿ ನಡೆದ ಸುಸ್ಥಿರ ಇಂಧನ ಅಭಿವೃದ್ಧಿ ಕುರಿತು ವಿಶೇಷ ಸಮಾಲೋಚನಾ ಸಭೆ ನೇತೃತ್ವ ವಹಿಸಿದ್ದ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯದ ನೂತನ ಇಂಧನ ಸಚಿವ ಸುನೀಲ್ ಕುಮಾರ ಅವರನ್ನು ಸೆ. 1 ರಂದು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದೇನೆ. ಕ್ರೆಡೆಲ್ ಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ವಿಕೇಂದ್ರೀಕೃತ ಸೌರ ಅಭಿವೃದ್ಧಿ ಯೋಜನೆ ರೂಪಿಸಲು ಮನವಿ ಮಾಡಿದ್ದೇವೆ. ಇಂದಿನ ಸಭೆಯ ಬಗ್ಗೆ ಮಾಹಿತಿ ನೀಡಿ ಇಲ್ಲಿನ ಶಿಫಾರಸುಗಳನ್ನು ಅವರಿಗೆ ನೀಡಲಿದ್ದೇವೆ ಎಂದು ಅನಂತ ಹೆಗಡೆ ಅಶೀಸರ ಪ್ರಕಟಿಸಿದರು. 13 ವರ್ಷಗಳ ತಳಮಟ್ಟದ ರಚನಾತ್ಮಕ ಸೌರ ಅಭಿವೃದ್ಧಿ ಯಶೋಗಾಥೆಗಳನ್ನು ಅಶೀಸರ ಮಂಡಿಸಿದರು.
ಸಹಕಾರೀ ಬ್ಯಾಂಕ್‍ಗಳು ಹಾಗೂ ಸಹಕಾರೀ ಸಂಘಗಳು ರೈತರಿಗೆ ಸೋಲಾರ್ ಸೌಲಭ್ಯ ನೀಡಲು ಆರ್ಥಿಕ ನೆರವು ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ನೀಡಲು ಅಶೀಸರ ಮನವಿ ಮಾಡಿದರು. ಸರ್ಕಾರದ ವಿವಿಧ ಅಭಿವೃದ್ಧಿ ಇಲಾಖೆಗಳು ತಮ್ಮ ಕ್ರಿಯಾಯೋಜನೆಗಳಲ್ಲಿ ಸೌರ ವಿದ್ಯುತ್ ಕಾರ್ಯಕ್ರಮ ಸೇರ್ಪಡಿಸಲು ಸೂಚಿಸಿದ ಅಶೀಸರ ಕಾಂಪಾ ಯೋಜನೆಯಲ್ಲಿ ದುರ್ಗಮ ಕಾಡಿನ ಪ್ರದೇಶದ ಆಯ್ದ ಹಳ್ಳಿಗಳಿಗೆ ಸೌರ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿ ಜಾರಿ ಮಾಡಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಸಲ್ಕೊ ಫೌಂಡೇಶನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೋಹನ್ ಹೆಗಡೆ ಅವರು ಮಾತನಾಡಿದರು. ಸೌರ ವಿದ್ಯುತ್ ಸುಸ್ಥಿರ ಅಭಿವೃದ್ಧಿಯ ಭಾಗವಾಗಿದೆ. ರಾಜ್ಯದ 22 ವಿಶೇಷ ಮಕ್ಕಳ ಶಾಲೆಗಳಿಗೆ ಸೌರ ಬೆಳಕು ನೀಡಿದ್ದೇವೆ. ಮಲೆನಾಡಿನ ದುರ್ಗಮವಾದ ಕಾಡಿನ ಹಳ್ಳಿಗಳಿಗೆ ವನವಾಸಿಗಳಿಗೆ ಬೆಳಕು ನೀಡುವ ಮಾದರಿ ಕಾರ್ಯ ಯೋಜನೆ ಜಾರಿ ಮಾಡಲಿದ್ದೇವೆ ಎಂದರು. ಒಂದು ಸಾವಿರ ವನವಾಸಿ ಕುಟುಂಗಳಿಗೆ ಸೌರ ಸೌಲಭ್ಯ ನೀಡಲು ಮುಂದಾಗಲಿದ್ದೇವೆ ಎಂದು ತಿಳಿಸಿದರು.
ಶಿರಸಿ ಹೆಸ್ಕಾಂ ಅಧಿಕಾರಿ ಸುಂದರೇಶ ಅವರು ಛಾವಣಿ ವಿದ್ಯುತ್ ಮೂಲಕ ಒಂದು ಮೆಗಾವ್ಯಾಟ ಉತ್ಪಾದನೆ ಶಿರಸಿ ತಾಲೂಕಿನಲ್ಲಿ ಆಗುತ್ತಿದೆ. ಮನೆಗಳಲ್ಲಿ ವಿಕೇಂದ್ರೀಕೃತವಾಗಿ ಸುಮಾರು ಒಂದು ಮೆಗಾವ್ಯಾಟ ವಿದ್ಯುತ್ ಸೋಲಾರ ಉತ್ಪಾದನೆ ಆಗುತ್ತಿದೆ. ಹೀಗೆ ಒಟ್ಟೂ ಸುಮಾರು 2 ಮೆಗಾವ್ಯಾಟ ಸೌರ ವಿದ್ಯುತ್ತಿನಿಂದ ಬರುತ್ತಿದೆ. ಶಿರಸಿ ತಾಲೂಕಿನಲ್ಲಿ ಒಟ್ಟೂ 14 ಮೆಗಾವ್ಯಾಟ ವಿದ್ಯುತ್ ವಿತರಣೆ ಆಗುತ್ತಿದೆ. 10% ವಿಕೇಂದ್ರೀಕೃತ ಸೌರ ವಿದ್ಯುತ್ ನಿಂದ ಬರುತ್ತಿದೆ ಎಂಬ ಮಾಹಿತಿ ನೀಡಿದರು. ಈ ಬಗ್ಗೆ ಇನ್ನಷ್ಟು ಮಾಹಿತಿ ಸಮೀಕ್ಷೆ ನಡೆಯಬೇಕಿದೆ ಎಂದರು. ಶಿರಸಿ ನಗರಸಭೆ ಕಮೀಶನರ್ ಕೇಶವ ಚೌಗಲೆ ಕ್ರಿಯಾ ಯೋಜನೆಗಳಲ್ಲಿ ಸೌರ ವಿದ್ಯುತ್‍ಗೆ ಒತ್ತು ನೀಡುತ್ತೇವೆ ಎಂದರು.
ಅರ್ಬನ್ ಬ್ಯಾಂಕ ಹಿರಿಯ ಅಧಿಕಾರಿ ಶ್ರೀಪತಿ ಭಟ್ ಗೃಹ ನಿರ್ಮಾಣ ಪ್ರಸ್ತಾವನೆಯಲ್ಲಿ ಸೌರ ಘಟಕ ಸೇರ್ಪಡೆ ಮಾಡಿದರೆ ಕಡಿಮೆ ಬಡ್ಡಿಗೆ ಸಾಲ ನೀಡಲು ಸಾಧ್ಯ ಎಂದರು. ಬೆಳೆಗಾರರ ಸಂಘದ ಜಿ.ಎಸ್. ಭಟ್ ಉಪ್ಪೋಣಿ ಅವರು ರೈತರಿಗೆ ಸೌರ ವಿದ್ಯುತ್ ಸೌಲಭ್ಯ ನೀಡಲು ಕೃಷಿ ಸಾಲ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು, ರಾಜ್ಯ ಮಟ್ಟದ ಸಹಕಾರೀ ಆದೇಶವಾದರೆ ಇದು ಸಾಧ್ಯ ಎಂದು ತಿಳಿಸಿದರು. ಛಾವಣಿ ಸೌರ ವಿದ್ಯುತ್ ಘಟಕ ನಿರ್ಮಿಸಲು ಯುನಿಟ್‍ಗೆ 7 ರೂ ನೀಡಲು ಕೆ.ಪಿ.ಟಿ.ಸಿ.ಎಲ್. ನಿರ್ಧಾರ ಪ್ರಕಟಿಸಬೇಕು ಇದಕ್ಕೆ ಬಹಳ ಬೇಡಿಕೆ ಇದೆ ಎಂದು ಉದ್ಯಮಿ ಶ್ರೀಕಾಂತ ಹೆಗಡೆ ತಿಳಿಸಿದರು. ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿಶ್ವನಾಥ ಇಡೀ ಗ್ರಾಮ ಸೌರ ಗ್ರಾಮವಾಗಿದೆ ಎಂದು ತಿಳಿಸಿದರು. ಸೆಲ್ಕೋ ಅಧಿಕಾರಿ ಪ್ರಸನ್ನ ಮಾತನಾಡಿದರು. ಸುಬ್ರಾಯ ಹೆಗಡೆ ವಂದನೆ ಹೇಳಿದರು. ಅಜಿತಮನೋಚೇತನಾದ ಮುಖ್ಯ ಶಿಕ್ಷಕಿ ನರ್ಮದಾ ಕಾರ್ಯಕ್ರಮ ನಿರ್ವಹಿಸಿದರು. ಶಿವಾನಂದ ಕಳವೆ, ಎಲ್. ಎಂ. ಹೆಗಡೆ ಭಾಗವಹಿಸಿದ್ದರು. ಅಜಿತ ಮನೋಚೇತನಾ ಪ್ರಮುಖರಾದ ಉದಯ ಸ್ವಾದಿ, ಪ್ರೊ. ರವಿ ನಾಯಕ, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಚಿನ್ನಣ್ಣನವರ ವೇದಿಕೆಯಲ್ಲಿದ್ದರು.