ಕುಮಟಾ: ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ತಾಲೂಕಿನ ಹೆಗಡೆಯಲ್ಲಿ ಮಹಿಳಾ ಕಾಂಗ್ರೆಸ್ ಸಮಾವೇಶ ಹಾಗೂ ಮಹಿಳೆಯರಿಗೆ ಅರಿಶಿಣ ಕುಂಕುಮ ಕಾರ್ಯಕ್ರಮ ನಡೆಯಿತು.
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮಾತನಾಡಿ, ಶ್ರಾವಣ ಮಾಸ ಎನ್ನುವುದು ಮಹಿಳೆಯರಿಗೆ ಹಬ್ಬದ ಮಾಸವಾಗಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ನಿರ್ದೇಶನದಂತೆ ಎಲ್ಲಾ ಕಡೆ ಮಹಿಳಾ ಕಾಂಗ್ರೆಸ್ ವತಿಯಿಂದ ಅರಿಶಿಣ ಕುಂಕುಮ ನೀಡಲಾಗುತ್ತಿದೆ ಎಂದ ಅವರು, ಮಹಿಳೆಯರು ಪಕ್ಷ ಸಂಘಟನೆಯಲ್ಲಿ ಹೆಚ್ಚು ಹೆಚ್ಚು ತೊಡಗಬೇಕು ಎಂದರು.
ಕಳೆದ ಬಾರಿ ನಾನು ಶಾಸಕಿಯಾಗಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಚ್ಚಿನ ಅನುದಾನ ನೀಡಿ ಕ್ಷೇತ್ರ ಅಭಿವೃದ್ಧಿ ಹೊಂದಲು ಸಹಕಾರ ನೀಡಿದ್ದರು. ಆದರೆ ಇಂದಿನ ಸರ್ಕಾರ ಹಿಂದಿನ ಅವಧಿಯಲ್ಲಿ ನಡೆದ ಕಾಮಗಾರಿಗಳನ್ನು ನಡೆಸುತ್ತಿದೆಯೇ ಹೊರತು ಹೊಸದಾಗಿ ಅನುದಾನಗಳನ್ನು ನೀಡುತ್ತಿಲ್ಲ. ಕೇವಲ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಅಲ್ಲದೇ, ಬೆಲೆ ಏರಿಕೆಯಿಂದ ಇಂದು ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್. ನಾಯ್ಕ, ಮಾತನಾಡಿ, ನಮ್ಮ ಪಕ್ಷದಲ್ಲಿ ಮಹಿಳೆಯರಿಗೆ ವಿಶೇಷ ಗೌರವವಿದೆ. ಮಹಿಳೆಯರು ಮನಸ್ಸು ಮಾಡಿದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಲ್ಲರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸಹ ಮಹಿಳೆಯೇ ಆಗಿದ್ದಾರೆ ನಾ ಎಂದರು.
ಜಿಪಂ ಮಾಜಿ ಸದಸ್ಯ ರತ್ನಾಕರ ನಾಯ್ಕ ಮಾತನಾಡಿ, ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಳ್ಳು ಆಶ್ವಾಸನೆಗಳನ್ನು ನೀಡುತ್ತ, ಸುಳ್ಳಿನಿಂದಲೇ ಸರ್ಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಹೆಗಡೆ ಗ್ರಾ.ಪಂ ಉಪಾಧ್ಯಕ್ಷ ಶಾಂತಾರಾಮ ನಾಯ್ಕ, ಪುರಸಭಾ ಮಾಜಿ ಸದಸ್ಯ ಗೀತಾ ಭಂಡಾರ್ಕರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ, ಸುರೇಖಾ ವಾರೇಕರ, ಶೋಭಾ ನಾಯ್ಕ, ಅನಿತಾ ಮಾಪಾರಿ, ದೀಕ್ಷಾ ಸಂತೋಷ ಮುಂತಾದವರು ಹಾಜರಿದ್ದರು.