ಶಿರಸಿ: ಗರಿ ಮುರಿ ಚಕ್ಕುಲಿ ಎಂದರೇ ಬಾಯಲ್ಲಿ ನೀರೂರುತ್ತದೆ. ಅದರಲ್ಲೂ ಹಲವು ಬಗೆಯ ಹಲವು ರುಚಿಕರ ಚಕ್ಕುಲಿ ಜನರನ್ನು ಕೈ ಬೀಸಿ ಕರೆಯುತ್ತಿದೆ. ಸಾಂಪ್ರ ದಾಯಿಕ ಚಕ್ಕುಲಿಯ ರುಚಿಗೆ ಅದೇ ಸಾಟಿ.
ಕೈಯಿಂದ ಚಕ್ಕುಲಿ ತಯಾರಿಸುವದನ್ನು ತರಬೇತಿ ರೂಪದಲ್ಲಿ ಆಸಕ್ತರಿಗೆ ಕಲಿಸುವ ಉದ್ದೇಶದಿಂದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ವತಿಯಿಂದ ಎರಡು ದಿನಗಳ ಕಾಲ ಕೈ ಚಕ್ಕುಲಿ ಕಂಬಳ ಹಾಗೂ ಸ್ಪರ್ಧೆ ಏರ್ಪಡಿಸಲಾಗಿದೆ. ಶುಕ್ರವಾರ ಕಂಬಳಕ್ಕೆ ಪ್ರಗತಿಪರ ಕೃಷಿಕರಾದ ವೇದಾ ನೀರ್ನಳ್ಳಿ ಚಾಲನೆ ನೀಡಿದರು. ಬೇರೆ ಬೇರೆ ಹಿಟ್ಟು, ಸಂಬಾರ ಪದಾರ್ಥಗಳನ್ನು ಉಪಯೋಗಿಸಿ ಉಪಕರಣದ ಮೂಲಕ ತಯಾರಿಸಿದ ಚಕ್ಕುಲಿಯ ಸ್ಪರ್ಧೆ, ಪ್ರದರ್ಶನ ಹಾಗೂ ಮಾರಾಟ ನಡೆಯಿತು.
ಸ್ಪರ್ಧೆಯಲ್ಲಿ ಆಲೂಗಡ್ಡೆ ಚಕ್ಲಿ, ಬಿಟ್ರೂಟ್, ಒಂದೆಲಗ, ಕ್ಯಾರೆಟ್, ಬೆಳ್ಳುಳ್ಳಿ, ಎಳ್ಳು, ಬಾಳೆಕಾಯಿ, ಸವತೆಕಾಯಿ ಕಾರದಪುಡಿ ಸೇರಿದಂತೆ ವಿವಿಧ ಚಕ್ಲಿಗಳು ಸ್ಪರ್ಧೆಯಲ್ಲಿ ಕಂಡುಬಂದವು.
ಕೈ ಚಕ್ಕುಲಿ ಮಾಡುವ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಸತ್ಯನಾರಾಯಣ ಹೆಗಡೆ, ಮಣಬಾಗಿ ಎರಡನೇ ಸ್ಥಾನವನ್ನು ಸುಮಾ ಹೆಗಡೆ ಮಣಬಾಗಿ, ಮೂರನೇ ಸ್ಥಾನವನ್ನು ಸುಬ್ರಾಯ ಕೃಷ್ಣ ಹೆಗಡೆ ಕಲ್ಮನೆ ಪಡೆದುಕೊಂಡರು. ಇದೇ ವೇಳೆ ವಿವಿಧ ಬಗೆಯ ಚಕ್ಕುಲಿ ಸ್ಪರ್ಧೆಯು ನಡೆಯಿತು.
ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಿನ ಅನೇಕರು ಭಾಗವಹಿಸಿದ್ದರು. ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಬುಲಿಂಗ ಹೆಗಡೆ, ಪ್ರಧಾನ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ, ಸಂಸ್ಥೆಯ ಮಂಜುನಾಥ ಮಾವಿನಕೊಪ್ಪ ಸೇರಿದಂತೆ ಅನೇಕರು ಇದ್ದರು.