ಕುಮಟಾ: ತಾಲೂಕಿನ ಹಿರೇಗುತ್ತಿ ಬಳಿ ಮಟ್ಕಾ ಆಡಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಕುಮಟಾ ತಾಲೂಕಿನ ಹಿರೇಗುತ್ತಿ ನುಶಿಕೋಟೆಯ 64 ವರ್ಷದ ಗೋವಿಂದ ನಾಯ್ಕ ಪೊಲೀಸರಿಂದ ವಶಕ್ಕೊಳಗಾದ ಆರೋಪಿಯಾಗಿದ್ದಾನೆ.
ಈತನು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಿನ ಹಿರೇಗುತ್ತಿ ಗ್ರಾಮದ ನುಶೀಕೊಟೆ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ತನ್ನ ಲಾಭಕ್ಕೋಸ್ಕರ ಅಲ್ಲಿ ಬಂದು ಹೋಗುವ ಜನರನ್ನು ಕರೆದು, ತಮ್ಮತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ, ಅದೃಷ್ಟ ಸಂಖ್ಯೆ ತಾಗಿದರೆ 01 ರೂ 80 ರೂ. ಕೊಡುವುದಾಗಿ ಹೇಳಿ ಅವರ ಮನವೊಲಿಸಿ, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು, ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಆಡಿಸುತ್ತಿದ್ದಾಗ ದಾಳಿ ನಡೆಸಿದ ಗೋಕರ್ಣ ಠಾಣೆ ಪಿಎಸ್‌ಐ ನವೀನ ಎಸ್.ನಾಯ್ಕ ಅವರ ತಂಡವು ಆರೋಪಿಯೊಂದಿಗೆ ನಗದು ಹಣ 1,270 ರೂ. ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.