ಕಾರವಾರ: 18 ವರ್ಷ ಮೇಲ್ಪಟ್ಟ ಹೊಸ ಮತದಾರರ ನೋಂದಣಿ ಕಾರ್ಯವನ್ನು ಆನ್‌ಲೈನ್ ಮೂಲಕ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆರಂಭಿಸುವುದರೊಂದಿಗೆ ಮತದಾನ ಪ್ರಕ್ರಿಯೆಕುರಿತು ವಿದ್ಯಾರ್ಥಿಗಳನ್ನು ಒಳಗೊಂಡ ಅಣಕು ಕಿರು ಚಿತ್ರ ತಯಾರಿಸುವಂತೆ ಜಿಲ್ಲೆಯ ಎಲ್ಲ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಸೋಚಿಸಿದ್ದಾರೆ.
ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಅರ್ಹ ಮತದಾರರು ಹೆಸರು ನೋಂದಣಿ ಮಾಡಲು ಅಗತ್ಯ ಕ್ರಮ ವಹಿಸಬೇಕು. ಈಗಾಗಲೇ ಹೆಸರು ನೋಂದಾಯಿತ ಹಾಗೂ ನೋಂದಾಯಿಸಬೇಕಿರುವ
ಅರ್ಹ ಮತದಾರರ ಯಾದಿಯನ್ನು ಸಿದ್ಧಪಡಿಸಿ ಜಿಲ್ಲಾ ಮಟ್ಟದ ತರಬೇತುದಾರರಿಗೆ (ಡಿಎಲ್‌ಎಂಟಿ) ಚುನಾವಣೆ ಹಾಗೂ ಮತದಾನದ ಪ್ರಕ್ರಿಯೆ, ಆನ್ ಲೈನ್ ಮೂಲಕ ಹೆಸರು ನೋಂದಾಯಿಸುವ ಕುರಿತು ವಿಶೇಷ ತರಬೇತಿ ಆಯೋಜಿಸಬೇಕು, ನಂತರ ತರಬೇತಿಗೊಂಡ ಡಿಎಲ್‌ಎಂಟಿಗಳಿಂದ ತಾಲೂಕಾ, ಹೋಬಳಿ ಮಟ್ಟದಲ್ಲಿ ತರಬೇತಿ ಆಯೋಜಿಸಿ, ಮತದಾನ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.
ಮತದಾರರಿಗೆ ಹೆಸರು ನೋಂದಣಿ, ಚುನಾವಣೆಯ ಪ್ರಕ್ರಿಯೆ ಹಾಗೂ ಮತದಾನದ ಬಗ್ಗೆ ಆನ್ ಲೈನ್ ಮೂಲಕ ಜಾಗೃತಿ ಮೂಡಿಸುವುದು. ಸೂಕ್ತವಾಗಿದೆ. ಚುನಾವಣೆಗಳು ಬೇರೆ ಬೇರೆ ಆಯಾಮಗಳಲ್ಲಿ ನಡೆಯುತ್ತಿದ್ದು, ಭಾವಿ ಮತದಾರರಿಗೆ ಚುನಾವಣೆಯ ಪಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ ನೈತಿಕ ಮತದಾನದ ಬಗ್ಗೆ ಅರಿವು ಮೂಡಿಸಬೇಕಿದೆ. ಮತದಾರರ ಚುನಾವಣಾ ಸುರಕ್ಷತಾ ಕ್ಲಬ್ ನ ಮೂಲಕ ಎಲ್ಲ ಮತದಾರರಿಗೆ ಚುನಾವಣೆಯ ಚಟುವಟಿಕೆಗಳ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ತರಬೇತಿದಾರರಿಗೆ ನೀಡಲು ಸಾಧ್ಯವಾಗುತ್ತದೆ ಎಂದರು.