ಯಲ್ಲಾಪುರ: ನಾಟಾ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ಶುಕ್ರವಾರ ನಡೆದಿದೆ.
ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ನಾಟಾ ತುಂಬಿಕೊಂಡು ಹೊರಟಿದ್ದ ಲಾರಿ ಆರತಿಬೈಲ್ ಘಟ್ಟದ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಬಿದ್ದಿದೆ. ಚಾಲಕ ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ. ಲಾರಿ ಜಖಂಗೊಂಡಿದ್ದು, ನಾಟಾಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ರಾಷ್ಟ್ರೀಯ ಹೆದ್ದಾರಿ ಮಧ್ಯೆ ಲಾರಿ ಪಲ್ಟಿ ಬಿದ್ದಿರುವುದರಿಂದ ಎರಡು ತಾಸುಗಳ ಕಾಲ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.