ಶಿರಸಿ: ವಿದ್ಯಾರ್ಥಿಗಳು ಸತತ ಪರಿಶ್ರಮ ವಹಿಸಿ ಉತ್ತಮ ಅಂಕ ಗಳಿಸುವುದರ ಜೊತೆಗೆ ಆದರ್ಶ ವ್ಯಕ್ತಿಗಳಾಗಿ ಸಮಾಜದ ಉನ್ನತಿಗೆ ಕೊಡುಗೆ ನೀಡುವಂತಾಗಲಿ. ಈ ಹಿನ್ನೆಲೆಯಲ್ಲಿ ದಾನಿ, ಶಿಕ್ಷಣ ಪ್ರೇಮಿ ಉಪೇಂದ್ರ ಪೈಯವರು ತಮ್ಮ ಹೆಸರಿನ ಟ್ರಸ್ಟ್ ಮೂಲಕ ಕಳೆದ 18 ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಪೆÇ್ರೀತ್ಸಾಹ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಈ ರೀತಿಯ ಕೊಡುಗೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಇಂದು ಕರೆ ನೀಡಿದರು.
ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಇಂದು ಮಾರಿಕಾಂಬಾ ಪ್ರೌಢಶಾಲೆಯಲ್ಲಿ ನಡೆದ ಉಚಿತ ಪಟ್ಟಿ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದು ಉಪೇಂದ್ರ ಪೈಯವರಂತೆ ಇತರ ಸಾಮಾಜಿಕ ಸೇವಕರೂ ತಮ್ಮ ಕೊಡುಗೆಯನ್ನು ನೀಡಿದರೆ ಸಾರ್ಥಕವಾಗುತ್ತದೆ ಎಂದರು.
ಉಪೇಂದ್ರ ಪೈ ಮಾತನಾಡಿ ತಾನು ಅತಿ ಬಡತನದ ನಡುವೆ ಬಾಲ್ಯವನ್ನು ಕಳೆದಿದ್ದು ಕಷ್ಟ ಎಂದರೆ ಏನು ಎಂಬುದನ್ನು ಅರಿತಿದ್ದೇನೆ. ಬಡತನ ಯಾರಿಗೂ ಬರಬಾರದೆಂಬ ಉದ್ದೇಶದಿಂದ ಕಳೆದ 18 ವರ್ಷಗಳಿಂದ ಪ್ರತಿ ವರ್ಷ ಶಿಕ್ಷಣಕ್ಕಾಗಿಯೇ ಸುಮಾರು 18 ಲಕ್ಷ ರೂಪಾಯಿ ಮೀಸಲಿಡುವುದಾಗಿ ತಿಳಿಸಿದರು. ಈ ವರ್ಷ 50 ಸಾವಿರ ಪಟ್ಟಿಗಳನ್ನು ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದೂ ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಆರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಟ್ರಸ್ಟ್ ವತಿಯಿಂದ ಈ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಯಿತು. ವೇದಿಕೆಯಲ್ಲಿ ನಗರಸಭಾಧ್ಯಕ್ಷ ಗಣಪತಿ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ಡಿಡಿಪಿಐ ದಿವಾಕರ ಶೆಟ್ಟಿ, ಬಿಇಓ ಎಂ. ಎಸ್. ಹೆಗಡೆ, ಉಪಪ್ರಾಚಾರ್ಯ ನಾಗರಾಜ ನಾಯ್ಕ ಇದ್ದರು.