ಕುಮಟಾ: ಲೂಡೋ ಆಡುವಾಗ ಬಾಯಿಯಲ್ಲಿ ಇಟ್ಟುಕೊಂಡಿದ್ದ ಲೂಡೋ ಕಾಯಿ ಆಕಸ್ಮಿಕವಾಗಿ ನುಂಗಿ ಹೋದ ಪರಿಣಾಮ ಬಾಲಕನೋರ್ವ ಅಸ್ವಸ್ಥಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡುವ ಮೂಲಕ ಲೂಡೋ ಕಾಯಿ ಹೊರ ತೆಗೆದು, ಬಾಲಕನ ಜೀವ ಉಳಿಸಿದ್ದಾರೆ.
ಲೂಡೋ ಕಾಯಿ ನುಂಗಿ ಹೋದ ಪರಿಣಾಮ ಶ್ವಾಸನಾಳದ ಒಳಗೆ ಹೋಗಿ ಎಡಭಾಗದ ಶ್ವಾಸಕೋಶವನ್ನು ಪೂರ್ತಿಯಾಗಿ ಮುಚ್ಚಿಕೊಂಡಿತ್ತು. ಇದರಿಂದ ಎದೆ ನೋವಿನಿಂದ ನರಳುತ್ತಿದ್ದ ತಾಲೂಕಿನ 15 ವರ್ಷದ ಬಾಲಕನಿಗೆ ಮಂಗಳೂರಿನ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಲುಡೋ ಕಾಯಿ ಹೊರ ತೆಗೆದು ಬಾಲಕನ ಜೀವ ಉಳಿಸಿದ್ದಾರೆ.
ಎದೆ ನೋವಿನಿಂದ ನರಳುತಿದ್ದ ಬಾಲಕನನ್ನು ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಎದೆಯ ಎಕ್ಸ್‌ರೇ, ಸಿಟಿ ಸ್ಕ್ಯಾನ್ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಡಾ. ಗಿರಿಧರ್ ಬಿ.ಎಚ್, ಡಾ. ನಂದಕಿಶೋರ್ ಬೈಕುಂಜೆ ಮತ್ತು ಡಾ. ಚಂದ್ರಮೌಳಿ ಎಮ್.ಟಿ ತಪಾಸಣೆ ಮಾಡಿ, ಲೂಡೋ ಕಾಯನ್ನು ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಬಾಲಕ ಈಗ ಚೇತರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.