ಕುಮಟಾ: ಜಿಲ್ಲೆಯಲ್ಲೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಥವಾ ಏಮ್ಸ್ ಆಸ್ಪತ್ರೆಯನ್ನು ಶೀಘ್ರದಲ್ಲೇ ನಿರ್ಮಿಸಬೇಕು. ಇಲ್ಲವಾದಲ್ಲಿ ವಿಧಾನಸೌಧ ಹಾಗೂ ಮುಖ್ಯಂಮತ್ರಿಗಳ ನಿವಾಸದ ಮುಂದೆ ಧರಣಿ ನಡೆಸಲಾಗುವುದು ಎಂದು ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ ಎಚ್ಚರಿಸಿದರು.
ಅವರು ಪಟ್ಟಣದ ಗಿಬ್ ಸರ್ಕಲ್ ವೃತ್ತದ ಬಳಿ ಉತ್ತರ ಕನ್ನಡಕ್ಕೊಂದು ಮಲ್ಟಿ ಸ್ಪೆಷಾಲಿಟಿ ತುರ್ತು ಆಸ್ಪತ್ರೆ ಬೇಕೆಂದು ಆಗ್ರಹಿಸಿ ಕರವೇ ಸ್ವಾಭಿಮಾನಿ ಬಣದ ವತಿಯಿಂದ ಪ್ರತಿಭಟನೆ ನಡೆಸಿ,ಸಹಾಯಕ ಆಯುಕ್ತರಾದ ರಾಹುಲ್ ಪಾಂಡೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಜಿಲ್ಲೆಯಲ್ಲಿ ನಡೆದ ಅಪಘಾತ ಹಾಗೂ ತುರ್ತು ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡವರ ಸಂಖ್ಯೆ ಹೆಚ್ಚು.ಈಗಾಗಲೇ ಜಿಲ್ಲೆಯ ಪ್ರಜ್ಞಾವಂತ ಯುವಕರು ಈ ಕುರಿತು ಅಭಿಯಾನ ನಡೆಸಿ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಜಿಲ್ಲೆಯ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಇದೆ.ಹೀಗಾಗಿ ಈ ಬಗ್ಗೆ ಯಾವುದೇ ಖಾಳಜಿ ತೋರುತ್ತಿಲ್ಲ.ತಮಗೆ ಲಾಭ ನೀಡುವ ಯೋಜನೆಯನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರುವ ಆಸ್ಪತ್ರೆ ವಿಚಾರದಲ್ಲಿ ಅಸಡ್ಡೆ ತೋರುತ್ತಿದ್ದಾರೆ.ದೊಡ್ಡ ನಾಯಕರುಗಳೇ ಇರುವ ನಮ್ಮ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದೇ ಜನ ಸಾಯುತ್ತಿದ್ದಾರೆ ಎಂದರೆ ಇದು ನಾಚಿಕೆಗೇಡಿನ ಸಂಗತಿ.ಹೀಗಾಗಿ ತುರ್ತು ಆಸ್ಪತ್ರೆ ಬೇಕೆನ್ನುವ ಜಿಲ್ಲೆಯ ಜನರ ದ್ವನಿಗೆ ನಾವು ಬದ್ದರಾಗಿದ್ದು ಮುಂದಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಕರವೇ ಸ್ವಾಭಿಮಾನಿ ಬಣದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಪಟ್ಟಣದ ಗಿಬ್ ಸರ್ಕಲ್ ವೃತ್ತದ ಬಳಿಯಿಂದ ಉಪವಿಭಾಗಾಧಿಕಾರಿ ಕಛೇರಿಯ ವರೆಗೆ ಅಪಘಾತವಾದ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ದೂರದ ಮಣಿಪಾಲ್,ಮಂಗಳೂರು ಆಸ್ಪತ್ರೆಗೆ ಸಾಗಿಸುವ ಅಣಕು ಪ್ರದರ್ಶನ ನಡೆಸಿ,ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ತಾಲೂಕು ಕಾನೂನು ಸಲಹೆಗಾರರಾದ ನಾಗರಾಜ ಹೆಗಡೆ, ಕರವೇ ಸ್ವಾಭಿಮಾನಿ ಬಣದ ತಾಲೂಕು ಹಾಗೂ ಗ್ರಾಮೀಣ ಘಟಕದ ಸದಸ್ಯರು ಹಾಜರಿದ್ದರು.