ಮುಂಡಗೋಡ: ಪ.ಪಂ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗೆ ಬಂದ ಅನುದಾನದ ಕ್ರಿಯಾಯೋಜನೆಯ ಚರ್ಚೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ಹೋದ ಘಟನೆ ಪ.ಪಂ.ಸಾಮಾನ್ಯ ಸಭೆಯ ಮುನ್ನ ನಡೆದಿದೆ.
ಪ.ಪಂ.ಸಭಾಭವನದಲ್ಲಿ ಮಂಗಳವಾರ ರೇಣುಕಾ ರವಿ ಹಾವೇರಿ ಅಧ್ಯಕ್ಷತೆಯ ಮಾಸಿಕ ಸಾಮಾನ್ಯ ಸಭೆಯಲ್ಲಿ ಕ್ರೀಯಾಯೋಜನೆ ಬಗ್ಗೆ ಪ್ರಸ್ತಾಪಿಸುತ್ತಿದ್ದ ವೇಳೆ ಈ ಇಬ್ಬರ ನಡುವೆ ಕೈ-ಕೈ ಮಿಲಸುವ ಹಂತಕ್ಕೆ ತಲುಪಿತ್ತು ನಂತರ ಇತರೆ ಸದಸ್ಯರು ಮಧ್ಯೆ ಪ್ರವೇಶಿಸಿ ಈ ಹಿಂದೆ ಇದ್ದ 33 ಲಕ್ಷ ಅಭಿವೃದ್ಧಿ ಹಣ ಮತ್ತು ಈ ಬಾರಿ ಬಂದ ಅನುದಾನ ಸೇರಿ ಒಟ್ಟು 84 ಲಕ್ಷದ ಹಣದಲ್ಲಿ 19 ಸದಸ್ಯರಿಗೆ ಸರಿಸಮಾನವಾದÀ ಅನುದಾನದ ಕ್ರೀಯಾ ಯೋಜನೆ ಮಾಡಿಕೊಳ್ಳಲು ಒಪ್ಪಿಗೆ ಪಡೆಯುವ ಮೂಲಕ ಗದ್ದಲ ತಿಳಿಯಾಯಿತು.
ಪ.ಪಂ. ಕಾರ್ಯಾಲಯದಲ್ಲಿ ಆರೋಗ್ಯ ನಿರೀಕ್ಷಕ, ಕಂದಾಯ ನಿರೀಕ್ಷಕ, ಇಬ್ಬರು ಎಸ್.ಡಿ.ಸಿ. ಸಿಬ್ಬಂದಿ ಕೊರತೆ ಇದ್ದು ಅದನ್ನು ನೀಗಿಸುವಂತೆ ಸದಸ್ಯ ಮಹಮ್ಮದ್‍ಗೌಸ್ ಮಕಾಂದಾರ ಹೇಳಿದರು. ಈ ಬಗ್ಗೆ ಸಚಿವರ ಗಮನಕ್ಕೆ ತರಲಾಗುವುದು ಎಂದು ಮುಖ್ಯಾಧಿಕಾರಿ ಸಂಗನಬಸಯ್ಯ ತಿಳಿಸಿದರು.
ಪಟ್ಟಣದಲ್ಲಿ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾದ ಬಗ್ಗೆ ಮಹಮ್ಮದ್‍ಗೌಸ್ ಮಕಾಂದಾರ ಪ್ರಸ್ತಾಪಿಸಿದಾಗ ಜಿಲ್ಲಾವಾರು ಟೆಂಡರ್ ಆಗಿದ್ದು ಬಿಡಾಡಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಮಾಡಲು ವೈದ್ಯರು ಬರುತ್ತಾರೆ. ನಾಯಿಗಳನ್ನು ಒಂದು ಕಡೆ ಕೂಡಿ ಹಾಕಿ ಒಂದು ವಾರ ಬೋನಿನಲ್ಲಿ ಇಟ್ಟು ಆರೈಕೆ ಮಾಡಿ ನಂತರ ಹೊರಗೆ ಬಿಡಲಾಗುವುದು ಎಂದು ಇಂಜಿನಿಯರ ಶಂಕರ ದಂಡಿನ ತಿಳಿಸಿದರು. ಸದಸ್ಯ ರಜಾಖಾನ್ ಪಠಾಣ ತುಂಬಾ ಹಳೆಯದಾದ ಸೋಲಾರ ಲೈಟುಗಳು ಹಾಳಾದ ಬಗ್ಗೆ ಹೇಳಿದಾಗ ಅವುಗಳನ್ನೆಲ್ಲ ಪರಿಶೀಲಿಸಿ ದುರಸ್ತಿ ಮಾಡಲು ಎಸ್ಟಿಮೇಟ್ ತಯಾರಿಸುವುದಾಗಿ ಇಂಜಿನಿಯರ ತಿಳಿಸಿದರು.
ಸರ್ವೇ ನಂ.7ರಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುವ ಡಿಪಿಆರ್ ತಯಾರಿಸಲು ಟೆಂಡರ್ ಅನ್ನು ಅನುದಾನವನ್ನು ಅವಲಂಬಿಸಿ ಕರೆಯಲಾಗುವುದು ಎಂದು ಶಂಕರ ದಂಡಿನ ತಿಳಿಸಿದರು. ಕಾರ್ಯಾಲಯದ ಜಮಾ-ಖರ್ಚು ಯಾದಿಯನ್ನು ದಿನಾಂಕವಾರು ತಯಾರಿಸಬೇಕು ಎಂದು ಸದಸ್ಯೆ ರಾಜೇಶ್ವರಿ ಅಂಡಗಿ ತಿಳಿಸಿದರು. ವಾರ್ಡ್‍ಗಳಿಗೆ ಗುಣಮಟ್ಟದ ಬೀದಿ ದೀಪಗಳ ಟ್ಯೂಬ್‍ಗಳನ್ನು ಅಳವಡಿಸಬೇಕು ಎಂದು ಸದಸ್ಯೆ ಕುಸುಮಾ ಹಾವಣಗಿ ಹೇಳಿದರು. ಶೌಚಾಲಯದ ಸಮಸ್ಯೆಗೆ ಸಂಬಂಧಿಸಿದಂತೆ ಯಾವುದೇ ಅರ್ಜಿಗಳು ಬಂದಲ್ಲಿ ಆಯಾ ವಾರ್ಡ್ ಸದಸ್ಯರ ಗಮನಕ್ಕೆ ತರಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಲಮಾಣಿ ತಿಳಿಸಿದರು.
ಮೂರು ತಿಂಗಳಿಗೊಮ್ಮೇ ಸಾಮಾನ್ಯ ಸಭೆ ನಡೆಸಿದರೆ ವಾರ್ಡಗಳ ಸಮಸ್ಯೆಗಳನ್ನು ಯಾರ ಜೊತೆ ಹಂಚಿಕೊಳ್ಳಬೇಕು ಪ್ರತಿ ತಿಂಗಳಿಗೊಮ್ಮೆಯಾದರು ಸಾಮಾನ್ಯ ಸಭೆ ನಡೆಸುವಂತೆ ಪ.ಪಂ ಸದಸ್ಯ ವಿಶ್ವನಾಥ ಪೊವಾಡಶೆಟ್ಟರ ಹೇಳಿದರು.
ಸಭೆಯು ಮುಗಿದ ಬಳಿಕ ಪಟ್ಟಣ ಪಂಚಾಯತ ಆವರಣದಲ್ಲಿ ಸದಸ್ಯರು ಬಂದ ಯೋಜನೆಯಲ್ಲಿ ಕಮೀಷನ್‍ಗಾಗಿ ಹೊಡೆದಾಡಲು ಪಟ್ಟಣ ಪಂಚಾಯತ ಸದಸ್ಯರು ಮುಂದಾಗಿದ್ದರೆಂದು ಮಾತನಾಡುತ್ತಿರುವುದು ಕಂಡು ಬಂದಿತು. ಉಪಾಧ್ಯಕ್ಷ ಮಂಜುನಾಥ ಹರಮಲಕರ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಲಮಾಣಿ, ಸರ್ವ ಸದಸ್ಯರು ಮತ್ತು ಸಿಬ್ಬಂದಿ ಇದ್ದರು.