ಭಟ್ಕಳ: ತಾಲೂಕಿನ ಶಿರಾಲಿ ಬಳಿಯ ಗುಡಿ ಹಿತ್ತಲ ಗ್ರಾಮದ 4 ವರ್ಷದ ಬಾಲಕಿ ನಿತೀಕ್ಷಾಗೆ ವಿಷಪೂರಿತ ಹಾವು ಕಡಿದಿತ್ತು. ಭಾನುವಾರದ ರಜೆಯ ನಡುವೆಯೂ ತಾಲೂಕು ಆಸ್ಪತ್ರೆಯ ಮಕ್ಕಳ ವೈದ್ಯ ಸುರಕ್ಷಿತ ಶೆಟ್ಟಿ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಗುಡಿಹಿತ್ತಲ ಗ್ರಾಮದ ನಿತೀಕ್ಷಾ ರಾಜೇಶ ನಾಯ್ಕ ಎಂಬ 4 ವರ್ಷದ ಬಾಲಕಿ ಮನೆಯಂಗಳದಲ್ಲಿ ಆಟ ಆಡುವಾಗ ನಾಗರ ಹಾವು ಕಡಿದಿತ್ತು. ಹಾವು ಕಡಿದ ಅರ್ಧ ಗಂಟೆಯ ನಂತರ ಪೆÇೀಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಭಾನುವಾರದ ರಜೆಯಿದ್ದರೂ ಕೂಡ ಆಸ್ಪತ್ರೆಯ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರ ಕರೆಯ ಮೇರೆಗೆ ತಕ್ಷಣ ಆಸ್ಪತ್ರೆಗೆ ಧಾವಿಸಿದ ವೈದ್ಯ ಸುರಕ್ಷಿತ ಶೆಟ್ಟಿ ಬಂದು ಸೂಕ್ತ ಚಿಕಿತ್ಸೆ ನೀಡಿ ಮಗುವಿನ ಜೀವ ರಕ್ಷಣೆ ಮಾಡಿದ್ದಾರೆ.
ಹಾವು ಕಡಿದು ಅರೆಪ್ರಜ್ಞಾವಸ್ಥಿತಿಯಲ್ಲಿದ್ದ ಬಾಲಕಿಗೆ ವೈದ್ಯ ಸುರಕ್ಷಿತ ಶೆಟ್ಟಿ 20 ಆಂಟಿ ಸ್ನೇಕ್ ವಿನೋಮಾ ಇಂಜೆಕ್ಷನ್ ನೀಡಿ, ದೇಹದಲ್ಲಿ ವಿಷ ಏರದಂತೆ ತಡೆದರು. ಸದ್ಯ ಬಾಲಕಿ ಸರ್ಕಾರಿ ಆಸ್ಪತ್ರೆಯ ಐಸಿಯು ವಾರ್ಡನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ.