ಶಿರಸಿ: ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ವತಿಯಿಂದ ಸೆ.3 ಮತ್ತು 4 ಸೆಪ್ಟೆಂಬರ್ ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಕೈ ಚಕ್ಕುಲಿ ಕಂಬಳ ಏರ್ಪಡಿಸಲಾಗಿದೆ.
ನೀರ್ನಳ್ಳಿ ವೇದಾ ಹೆಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಂಭುಲಿಂಗ ಹೆಗಡೆ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆವಿಕೆಯ ಡಾ. ರೂಪಾ ಪಾಟೀಲರವರು ಭಾಗವಹಿಸಲಿದ್ದಾರೆ.
ಮಲೆನಾಡಿನ ಪ್ರಾದೇಶಿಕ ಸೊಗಡಿನಲ್ಲೊಂದಾದ ಕೈ ಚಕ್ಕುಲಿಯ ರುಚಿ ವಿಶೇಷವಾದದ್ದು. ಬಹಳ ನಾಜೂಕಿನ ಅತಿವಿರಳ ಕಲೆಯಾದ ಕೈ ಚಕ್ಕುಲಿಯ ತಯಾರಿಸುವುದು ಬಹಳ ಹಳೆಯ ಸಂಪ್ರದಾಯ. ಆದರೆ ಅದರ ತಯಾರಿಕೆ ಮರೆಯಾಗುತ್ತಿರುವ ಕಾರಣ ಈ ತಿನಿಸಿನ ಮಹತ್ವ ಅನೇಕರಿಗೆ ತಿಳಿದಿಲ್ಲ. ಅಭ್ಯಾಸವಿಲ್ಲದೆ ಖಂಡಿತಾ ಬರಲಾರದ ಬರೀ ಕೈಯಿಂದಲೇ ಚಕ್ಕುಲಿ ತಯಾರಿಸುವದನ್ನು ತರಬೇತಿ ರೂಪದಲ್ಲಿ ಆಸಕ್ತರಿಗೆ ಕಲಿಸುವ ಉದ್ದೇಶದಿಂದ ಈ ಕಂಬಳವನ್ನು ಆಯೋಜಿಸಿದೆ.
ಕೈ ಚಕ್ಕುಲಿಯೊಂದಿಗೆ ಬೇರೆ ಬೇರೆ ಹಿಟ್ಟು, ಸಂಬಾರ ಪದಾರ್ಥಗಳನ್ನು ಉಪಯೋಗಿಸಿ ಉಪಕರಣದ ಮೂಲಕ ತಯಾರಿಸಿದ ಚಕ್ಕುಲಿಯ ಸ್ಪರ್ಧೆಯೂ ಇರಲಿದ್ದು ರುಚಿ ಹಾಗೂ ಬಾಳಿಕೆ ಜಾಸ್ತಿಯಿರುವ ಚಕ್ಕುಲಿಗೆ ಮಾರುಕಟ್ಟೆ ಒದಗಿಸುವ ಕೆಲಸವನ್ನೂ ಕದಂಬದ ಮೂಲಕವೇ ಮಾಡಲಾಗುವದು. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಮುಂಚಿತವಾಗಿ ಹೆಸರನ್ನು ನೊಂದಾಯಿಸಿಕೊಳ್ಳಬೇಕಿದ್ದು ಹೆಚ್ಚಿನ ಮಾಹಿತಿಗಾಗಿ ಶ್ರೀವತ್ಸ ಹೆಗಡೆ ಮೊ. 9535502274, ಕದಂಬ ಮಾರ್ಕೆಟಿಂಗ್ 08384-233163 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.,