ಸಿದ್ದಾಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ರಾಷ್ಟ್ರೀಯ ಹಣಗಳಿಕೆಯ ಪೈಪ್‍ಲೈನ್ (NMP) ಅಡಿಯಲ್ಲಿ 13 ವಲಯಗಳನ್ನು ಖಾಸಗೀಕರಣಗೊಳಿಸುತ್ತಿರುವದನ್ನು ವಿರೋಧಿಸಿ ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಆ.30 ಸೋಮವಾರ ಸಿದ್ದಾಪುರ ಗಾರ್ಡನ್ ಸರ್ಕಲ್ ನಿಂದ ಪ್ರತಿಭಟನೆ ನಡೆಸಿದರು.
ಸಿದ್ದಾಪುರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಹಾಗೂ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಸಹಯೋಗದಲ್ಲಿ ಪ್ರತಿಭಟನಾ ರ್ಯಾಲಿ ಮೂಲಕ ಮೋದಿ ಸರ್ಕಾರ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದ ದಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಿದ್ದಾಪುರದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಸರ್ಕಾರದ ಸಾರ್ವಜನಿಕ ಆಸ್ತಿಗಳ ಖಾಸಗೀಕರಣ ವಿರೋಧಿಸಿ ರಾಜ್ಯಪಾಲರಿಗೆ ತಹಶೀಲ್ದಾರರ ಮುಖಾಂತರ ಮನವಿ ನೀಡಿದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕುಮಾರ ಜೋಷಿ ಮಾತನಾಡಿ ಖಾಸಗೀಕರಣದ ಹಿಂದೆ ಸರಕಾರದ ಸ್ವತ್ತುಗಳನ್ನು ಖಾಸಗೀ ಉದ್ಯಮಿಗಳಿಗೆ ಮಾರುವ ದುರುದ್ದೇಶ ಬಿಜೆಪಿ ಸರ್ಕಾರದ್ದಾಗಿದೆ ಎಂದು ಹೇಳಿದರು.
ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಸಿದ್ದಾಪುರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ನಾಯ್ಕ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸೂರಜ್ ನಾಯ್ಕ, ಸಿದ್ದಾಪುರ ಮಹಿಳಾ ಬ್ಲಾಕ್ ಅಧ್ಯಕ್ಷೆ ಸೀಮಾ ಹೆಗಡೆ, ವಿ. ಏನ್ ನಾಯ್ಕ ಬೇಡ್ಕಣಿ, ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.