ಶಿರಸಿ: ಸಾಹಿತಿಗಳು ಓದುಗರ ನಿರೀಕ್ಷೆ ಸಾಮಥ್ರ್ಯ, ಮತ್ತು ಆಸಕ್ತಿಯನ್ನು ಅರಿತು ಶ್ರೇಷ್ಠ ಸಾಹಿತ್ಯ ನೀಡಲು ಸಮಾಜಮುಖಿಯಾಗಬೇಕು. ಓದುಗರ ಮಟ್ಟವನ್ನು ತಪ್ಪಾಗಿ ಗ್ರಹಿಸಿ ಅಪಮೌಲ್ಯೀಕರಣಕ್ಕೆ ಓದುಗರನ್ನು ವಸ್ತುವಾಗಿಸಬಾರದು ಎಂದು ಡಾ.ಜಿ.ಎ ಹೆಗಡೆ ಸೋಂದಾ ಹೇಳಿದರು.
ಜೀವಿ ಕೊಪ್ಪಲತೋಟರ 8ನೇ ಕೃತಿ ಧಾರವಾಡದ ವಿದ್ವಾಂಸ ವಿ.ಸಿ ಐರಸಂಘರ 'ಬದುಕು ಬರಹ'' ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು. ಓದುಗರನ್ನು ಸೃಷ್ಟಿಸುವಲ್ಲಿ ಲೇಖಕರ ಹೊಣೆಗಾರಿಕೆ ತುಂಬಾ ಮಹತ್ವದ್ದಾಗಿದೆ ಡಾ|| ಎಸ್.ಎಲ್ ಭೈರಪ್ಪನವರು ಅಪಾರ ಸಂಖ್ಯೆಯ ಓದುಗರನ್ನು ಸೃಷ್ಟಿಸಿ, ಮನೆಮಾತಾಗಿದ್ದಾರೆ. ಇದು ನಮ್ಮೆಲ್ಲರಿಗೆ ದಾರಿದೀಪವಾಗಿದೆ ಎಂದು ಸೋಂದಾ ಹೇಳಿದರು. ಕೃತಿಕಾರ ಕೊಪ್ಪಲತೋಟರು ಸಾಹಿತ್ಯ ಸರಸ್ವತಿಯ ಆರಾಧನೆಯಲ್ಲಿ ತೊಡಗಿಕೊಂಡ ತನಗೆ ಈ ಕೃತಿಯ ಲೋಕರ್ಪಣೆ ಆತ್ಮ ತೃಪ್ತಿ ನೀಡಿದ್ದು ಹೊಂಗೀರಣ ಪೌಂಡೇಶನ ಈ ಕೃತಿಯ ಬಿಡುಗಡೆಯಲ್ಲಿ ಸಹಯೋಗ ನೀಡಿದ್ದು ಸಂತಸ ತಂದಿದೆ ಎಂದರು. ಮುಖ್ಯ ಅತಿಥಿ ಕೆ.ಎನ್. ಹೊಸ್ಮನಿ ಐರಸಿಂಗರ ಕವಿತ್ವ ಪ್ರತಿಭೆಯನ್ನು ಎಳೆ ಎಳೆಯಾಗಿ ವಿವರಿಸಿ ಸಾಹಿತ್ಯವನ್ನೇ ಉಸಿರಾಡಿದ ಭಾವಜೀವಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಜನಮಾಧ್ಯಮ ಸಂಪಾದಕ ಅಶೋಕ ಹಾಸ್ಯಗಾರರು, ಐರಸಿಂಗರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಭಾವಗೀತೆಯ ಪ್ರಪಂಚದಲ್ಲಿ ವಿಹಂಗಮವಾಗಿ ವಿಹರಿಸಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು ಅವರ ಜೀವನವೇ ಭಾವಗೀತೆಯ ಭಾವಗೀತವಾಗಿದೆ ಎಂದರು.
ಮಹಿಮಾ ಹೆಗಡೆ ಪ್ರಾರ್ಥನೆಯೊಂದಗೆ ಆರಂಭವಾದ ಕಾರ್ಯಕ್ರಮದಲ್ಲಿ ಗಣಪತಿ ಭಟ್ಟ ವರ್ಗಾಸರ ಪುಸ್ತಕ ಪರಿಚಯಿಸಿದರೆ, ಕೃಷ್ಣ ಪದಕಿ ಕಾರ್ಯಕ್ರಮ ನಿರ್ವಹಿಸಿದರು. ಹೊಂಗಿರಣ ಪೌಂಡೇಶನಿಂದ ಡಾ. ಜಿ.ಎ. ಹೆಗಡೆ ಸೋಂದಾ, ಧಾರವಾಡದ ಗುರುಕುಲ ಟ್ರಸ್ಟನಿಂದ ರತ್ನಾ ಐರಸಿಂಗ ಕೊಪ್ಪಲತೋಟರನ್ನು ಸನ್ಮಾನಿಸಿದರು.
ನಂತರ ಡಿ.ಎಂ. ಭಟ್ಟ ಕುಳವೆ ಅವರ ಅಧ್ಯಕ್ಷತೆಯಲ್ಲಿ ನಡೆದ
‘ಬದುಕು ಬರಹ” ಸಾಹಿತ್ಯಿಕ ಚಿಂತನದಲ್ಲಿ ವಿದ್ವತ್‍ಪೂರ್ಣವಾಗಿ ವಿಷಯ ಮಂಡಿಸಿದ ಶಿಕ್ಷಕ ಸಾಹಿತಿ ರಮೇಶ ಹೆಗಡೆ ಕೆರೆಕೋಣ, ಜೀವನವು ಅರಿವಿನ ಪಾಠಶಾಲೆ, ನಿಂತ ನೆಲದ ಜೀವನಾನುಭವವೇ ಸತ್ವಭರಿತ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿ ಜೀವನದ ಪ್ರತಿಬಿಂಬವಾಗುತ್ತದೆ ಎಂದರು.
ಸಂವಾದದಲ್ಲಿ ಸಾಹಿತಿಗಳಾದ ಕೃಷ್ಣ ಪದಕಿ, ಕೆ. ಮಹೇಶ, ಎಚ್ ಗಣೇಶ, ತಮ್ಮ ಅಭಿಪ್ರಾಯ ಮಂಡಿಸಿದರು. ಹಿರಿಯ ಸಾಹಿತಿ ಮನೋಹರ ಮಲ್ಮನೆ ಸಮನ್ವಯಕಾರರಗಿ ಮಾತನಾಡಿ ಬರೆದಂತೆ ಬದುಕುವುದು, ಬದುಕಿದಂತೆ ಬರೆಯುವುದು ಎರಡು ಸವಾಲಿನ ಕೆಲಸ, ಜನವಾಣಿ ಬೇರಾಗಿ ಕವಿ ವಾಣಿ ಹೂವಾದಾಗ ಜೀವನದ ವಾಸ್ತವತೆ ಅರಿವಾಗುತ್ತದೆ ಎಂದರು.