ಮುಂಡಗೋಡ: ತಾಲೂಕಾದ್ಯಂತ ಭೂಮಿ ಸಾಗುವಳಿದಾರರ ವಿವಿಧ ರೀತಿಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರಕಾರ ನಿರ್ಲಕ್ಷ್ಯ ಭಾವನೆ ತೊರಿಸಿರುವುದು ಖಂಡನಾರ್ಹ. ರೈತರ ಭೂಮಿ ಹಕ್ಕು ಮತ್ತು ಸಮಸ್ಯೆಗಳಿಗೆ ಸ್ಫಂದಿಸಲು ಮುಂಡಗೋಡದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ತಾಲೂಕಾ ಭೂಮಿ ಹಕ್ಕು ಹೋರಾಟಗಾರರ ಪ್ರಮುಖರ ವೇದಿಕೆಯ ಚರ್ಚೆಯಲ್ಲಿ ತೀರ್ಮಾನಿಸಲಾಗಿದೆ.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ತಾಲೂಕಾದ್ಯಂತ ಭೂಮಿ ಹಕ್ಕು ಹೋರಾಟಗಾರರು ಇಂದು ಪ್ರವಾಸಿ ಮಂದಿರದಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತೆಂದು ವೇದಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಲೂಕಾದ್ಯಂತ ಅರಣ್ಯ ಭೂಮಿ ಮಂಜೂರಿ ಪ್ರಕ್ರೀಯೆ ಸ್ಥಗಿತಗೊಂಡಿರುವುದು, ಕಂದಾಯ ಮತ್ತು ಅರಣ್ಯ ಪ್ರದೇಶದಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಭಾವನೆ, ಬೆಳೆನಷ್ಟಕ್ಕೆ ಇಲ್ಲದ ಪರಿಹಾರ, ಅತೀವೃಷ್ಟಿಯಿಂದ ಉಂಟಾದ ನಷ್ಟ, ವಿಮೆ ಪರಿಹಾರದಲ್ಲಿ ತಾಂತ್ರಿಕ ದೋಷ, ಜಿಪಿಎಸ್ ಆಗದೇ ಇರುವುದು ಮುಂತಾದ ಸಮಸ್ಯೆಗಳ ಕುರಿತು ತಾಲೂಕಾದ್ಯಂತ ಆಗಮಿಸಿದ ಭೂಮಿ ಹಕ್ಕು ಹೋರಾಟಗಾರರು ಸರಕಾರದ ರೈತ ವಿರೋಧಿ ನೀತಿ ಕುರಿತು ಚರ್ಚೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಭೂಮಿ ಹಕ್ಕು ಹೋರಾಟಗಾರರಾಗಿರುವ ಶಿವಾನಂದ ಜೋಗಿ, ಶೇಖಯ್ಯ ಹಿರೇಮಠ, ಲಕ್ಷ್ಮಣ ವಾಲ್ಮೀಕಿ, ನನ್ನೆಸಾಬ ಚಪಾತಿ, ರಾಮು ಗೌಳಿ, ನಾಗರಾಜ ಮಾಡಳ್ಳಿ, ವಿರಭದ್ರಪ್ಪ ಗಳಗಿ, ಚಿಕ್ಕಪ್ಪ ಸಾಬಣ್ಣ, ಪರಸಪ್ಪ ಮುಕ್ಕಲ್ ಮುಂತಾದ ನೂರಾರು ಹೋರಾಟಗಾರ ಪ್ರಮುಖರು ಭಾಗವಹಿಸಿದ್ದರು.
ಅರಣ್ಯ ಹಕ್ಕು ಅರ್ಜಿ ಶೇ 48 ಬಾಕಿ: ತಾಲೂಕಾದ್ಯಂತ ಅರಣ್ಯ ಹಕ್ಕು ಕಾಯಿದೆಯಲ್ಲಿ ವಿವಿಧ ಹಕ್ಕಿಗೆ ಸಂಬಂಧಿಸಿ 6,210 ಅರ್ಜಿಗಳು ಸ್ವೀಕಾರ ಆಗಿದ್ದು, ವಿವಿಧ ಕಾರಣಗಳಿಂದ ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ಮಾಹಿತಿ ಕೊರತೆಯಿಂದ 2,980 ಅರ್ಜಿಗಳು ವಿಚಾರಣೆಗೆ ಮಾಡಬೇಕಾಗಿದ್ದು ಅರ್ಜಿಗಳ ಸಂಖ್ಯೆ ಶೇ. 48 ರಷ್ಟು ಇದ್ದು ಕೇವಲ 21 ಅರ್ಜಿಗಳಿಗೆ ಮಾತ್ರ ಮಾನ್ಯತೆ ಸಿಕ್ಕಿದೆ ಎಂದು ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಚರ್ಚೆಯ ಸಂದರ್ಭದಲ್ಲಿ ಹೇಳಿದರು.
ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ: ವನ್ಯಪ್ರಾಣಿಗಳಿಂದ ಬೆಳೆನಷ್ಟವಾಗಿರುವ ಕುರಿತು ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಕುರಿತು ಚರ್ಚೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದಲ್ಲದೇ, ಆಕ್ರೋಶಭರಿತವಾಗಿ ಹೋರಾಟಗಾರರು ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದರು.