ಕುಮಟಾ: ತಾಲೂಕಿನಲ್ಲಿ ಶನಿವಾರ ಮತ್ತು ರವಿವಾರ ಎರಡು ದಿನಗಳ ಕಾಲ ಸಿಇಟಿ ಪರೀಕ್ಷೆ ಕೋವಿಡ್ ನಿಯಮಾನುಸಾರ ಯಶಸ್ವಿಯಾಗಿ ನಡೆಯಿತು.
ತಾಲೂಕಿನಲ್ಲಿ ಎರಡು ಸಿಇಟಿ ಪರಿಕ್ಷಾ ಕೇಂದ್ರಗಳಿದ್ದು ಡಾ.ಎ.ವಿ.ಬಾಳಿಗಾ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ 195 ವಿದ್ಯಾರ್ಥಿಗಳು, ಬೆಣ್ಣೆ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 193 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶನಿವಾರ ಜೀವಶಾಸ್ತ್ರ, ಗಣಿತ ಹಾಗೂ ರವಿವಾರ ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆ ನಡೆದಿದ್ದು ವಿದ್ಯಾರ್ಥಿಗಳು ಗೊಂದಲ, ಆತಂಕಕ್ಕೊಳಗಾಗದೆ ಪರೀಕ್ಷೆ ಎದುರಿಸಿದ್ದಾರೆ.
ಸಿಇಟಿ ಪರೀಕ್ಷೆಯನ್ನು ಉಪವಿಭಾಗಾಧಿಕಾರಿ ರಾಹುಲ್ ಪಾಂಡೆ ಅವರ ಸೂಚನೆಯಂತೆ ಕಟ್ಟುನಿಟ್ಟಾಗಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ನಡೆಸಲಾಗಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನವೆ ಸ್ಕ್ರೀನಿಂಗ್ ಟೆಸ್ಟ್ ಮತ್ತು ಸ್ಯಾನಿಟೈಸರ್ ನೀಡಲಾಗಿದೆ.ಇನ್ನು ವಿದ್ಯಾರ್ಥಿಗಳ ಹೊರತಾಗಿ ಪರೀಕ್ಷಾ ಕೊಠಡಿಗೆ ಹೊರಗಿನ ವ್ಯಕ್ತಿಗೆ ಪ್ರವೇಶ ನಿಷೇಧಿಸಲಾಗಿತ್ತು ಎಂದು ಬಾಳಿಗಾ ಕಾಲೇಜಿನ ಪ್ರಾಚಾರ್ಯೆ ವೀಣಾ ಕಾಮತ್ ತಿಳಿಸಿದರು