ಯಲ್ಲಾಪುರ:ತಾಲೂಕಿನ ಮದನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಗದ್ದೆಗಳಿಗೆ ನುಗ್ಗಿ ಬೆಳೆನಾಶಮಾಡಿದ ಘಟನೆ ನಡೆದಿದೆ.
ಮದನೂರು ವ್ಯಾಪ್ತಿಯ ಹುಲಗೋಡ ಭಾಗದಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಕಾಡಾನೆಗಳ ಹಿಂಡು ಓಡಾಡುತ್ತಿದ್ದು 7-9 ಆನೆಗಳಿರುವ ತಂಡ ಹುಲಗೋಡ ಭಾಗದಲ್ಲಿ ಗದ್ದೆಗಳಲ್ಲಿ ಓಡಾಡಿ ಬೆಳೆ ನಾಶ ಮಾಡಿವೆ.
ಹುಲಗೋಡ ಉಪ್ಪರಿಗೆಯ ವೆಂಕಟ್ರಮಣ ಭಟ್ಟ, ರಾಮಚಂದ್ರ ಭಟ್ಟ, ಮಹಾಬಲೇಶ್ವರ ಭಟ್ಟ, ಕೃಷ್ಣ ಭಟ್ಟ ಹಾಗೂ ಇತರರಿಗೆ ಸೇರಿದ 3 ಎಕರೆಯಲ್ಲಿ ಬೆಳೆದ ಜೋಳ, 5 ಎಕರೆಯಲ್ಲಿ ಬೆಳೆದ ಭತ್ತದ ಬೆಳೆಯನ್ನು ಹಾಳು ಮಾಡಿವೆ. ಜತೆಗೆ ಸುತ್ತಮುತ್ತ ನಾಟಿ ಮಾಡಿದ ಭತ್ತದ ಬೆಳೆ, ಗೋವಿನಜೋಳ, ಕಬ್ಬು ಸೇರಿದಂತೆ ಹತ್ತಾರು ಎಕರೆ ವ್ಯಾಪ್ತಿಯಲ್ಲಿ ಬೆಳಗಳು ಆನೆ ಹಿಂಡಿನ ದಾಳಿಗೆ ಸಿಕ್ಕಿ ನೆಲಕಚ್ಚಿದೆ.
ಪ್ರತಿ ವರ್ಷ ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ವೇಳೆಗೆ ಆನೆಗಳು ಬರುತ್ತಿದ್ದವು ಆದರೆ ಈ ಬಾರಿ ಒಂದು ತಿಂಗಳು ಮೊದಲೇ ಗ್ರಾಮಕ್ಕೆ ಲಗ್ಗೆ ಇಟ್ಟಿದ್ದು ರೈತರು ಬೆಳೆರಕ್ಷಣೆ ಮಾಡಲಾಗದೆ ಕಂಗಾಲಾಗುವಂತಾಗಿದೆ. ಗ್ರಾಮಸ್ಥರು ಎಷ್ಟೇ ಪ್ರಯತ್ನಪಟ್ಟರೂ ಆನೆಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ.
ತಿಂಗಳ ಹಿಂದಷ್ಟೇ ಅತಿವೃಷ್ಟಿಯಿಂದಾಗಿ ವ್ಯಾಪಕ ಹಾನಿಯನ್ನು ರೈತರು ಅನುಭವಿಸಿದ್ದಾರೆ. ಗದ್ದೆ, ತೋಟಗಳಿಗೆ ಹಳ್ಳದ ನೀರು ನುಗ್ಗಿ ಫಲವತ್ತತೆ ನಾಶವಾಗಿದೆ. ಅದರಿಂದ ಹೇಗೋ ಅಲ್ಪಸ್ವಲ್ಪ ಸುಧಾರಿಸಿಕೊಳ್ಳುವಷ್ಟರಲ್ಲೇ ಕಾಡಾನೆಗಳ ಹಾವಳಿ ಆರಂಭವಾಗಿದ್ದು, ಇನ್ನಷ್ಟು ತೊಂದರೆಗೀಡು ಮಾಡಿದೆ.
ಪ್ರತಿ ವರ್ಷವೂ ಮದನೂರು, ಕಿರವತ್ತಿ ಭಾಗದಲ್ಲಿ ಆನೆಗಳ ಹಾವಳಿಯಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆ ನಷ್ಟವಾಗುತ್ತಿರುವ ಪ್ರಕರಣಗಳು ನಡೆಯುತ್ತಲೇ ಇದೆ.
ಈ ಕುರಿತು ಅರಣ್ಯ ಇಲಾಖೆ ಅಲ್ಪಸ್ವಲ್ಪ ಪರಿಹಾರ ನೀಡಿ ಸುಮ್ಮನಾಗಿಬಿಡುತ್ತದೆ. ಅದರ ಬದಲು ಆನೆಗಳ ಹಾವಳಿ ತಡೆಗಟ್ಟಲು ಸರಿಯಾದ ಕಾರ್ಯಯೋಜನೆ ರೂಪಿಸಿ, ಸಮಸ್ಯೆ ಪರಿಹರಿಸುವತ್ತ ಇಲಾಖೆ ಮುಂದಾಗಬೇಕು. ರೈತರ ಶ್ರಮ ವ್ಯರ್ಥವಾಗದಂತೆ ರೈತರ ಹಿತ ಕಾಪಾಡುವತ್ತ ಇಲಾಖೆ ಗಮನ ಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.