ಬೆಂಗಳೂರು: ಕರ್ನಾಟಕದಲ್ಲಿ ಕಾರ್ಮಿಕ ವಿಮಾ ನಿಗಮದಿಂದ (ಇಎಸ್‍ಐ) ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆ ಆರಂಭ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಸ್ತುತ ಇರುವ ಇಎಸ್‍ಐ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯಗಳಿವೆ. ಆದರೂ ರೋಗಿಗಳನ್ನು ಎಂ ಪ್ಯಾನೆಲ್ ಪಟ್ಟಿಯಲ್ಲಿ ಇರುವ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ಇಲಾಖೆಗೆ ಹೆಚ್ಚು ವೆಚ್ಚವಾಗುತ್ತದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಆಸ್ಪತ್ರೆ ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ 180 ಇಎಸ್‍ಐ ಚಿಕಿತ್ಸಾಲಯಗಳಿವೆ. ಅವುಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ, ಮುಂದಿನ ವಾರ ನವದೆಹಲಿಗೆ ತೆರಳಿ ಹೊಸ ಇಎಸ್‍ಐ ಆಸ್ಪತ್ರೆಗಳ ನಿರ್ಮಾಣಕ್ಕೆ ನೆರವು ಕೋರಿ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಹೆಬ್ಬಾರ್ ಹೇಳಿದ್ದಾರೆ.