ಯಲ್ಲಾಪುರ: ಹಿಂದು ಧರ್ಮದ ಶ್ರೇಷ್ಠ ಹಬ್ಬಗಳಲ್ಲಿ ಒಂದಾದ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ, ವಿವಿಧ ಸಂಘಟನೆಗಳ ಪ್ರಮುಖರು ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೆ ಸರ್ಕಾರ ಹಲವಾರು ನಿರ್ಬಂಧವನ್ನು ಹೇರುತ್ತಿದೆ. ಇದರಿಂದ ಆಸ್ತಿಕರ ಮನಸ್ಸಿಗೆ ನೋವುಂಟಾಗಿದೆ. ಕೋವಿಡ್ ನಿಯಮಾನುಸಾರ ಸಾರ್ವಜನಿಕ ಗಣೇಶೋತ್ಸವದ ಆಚರಣೆಗೆ ಅವಕಾಶ ನೀಡಬೇಕು. ಸ್ವಾತಂತ್ರ್ಯ ಪೂರ್ವದಿಂದಲೂ ಸಾರ್ವಜನಿಕವಾಗಿ ಸಾಮಾಜಿಕ ಜಾಗೃತಿಗಾಗಿ ಗಣೇಶೋತ್ಸವ ಆಚರಿಸಿಕೊಂಡು ಬರಲಾಗಿದೆ. ಹೀಗಿರುವಾಗ ನಿರ್ಬಂಧ ಹೇರಿದರೆ, ಬಹಳಷ್ಟು ಜನ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಈಗಾಗಲೇ ಮೂರ್ತಿಗಳನ್ನು ಸಿದ್ಧಪಡಿಸಲಾಗಿದ್ದು, ಏಕಾಏಕಿ ನಿರ್ಭಂಧ ಸರಿಯಲ್ಲ. ಕಾರಣ ನಿಯಮಾನುಸಾರ ಸಾರ್ವಜನಿಕ ಆಚರಣೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿಂದು ಸಂಘಟನೆಗಳ ಪ್ರಮುಖರಾದ ರಾಮು ನಾಯ್ಕ, ಸಂತೋಷ ಗುಡಿಗಾರ, ಸೋಮೇಶ್ವರ ನಾಯ್ಕ, ದಿಲೀಪ ಅಂಬಿಗ, ನಾಗೇಶ ಯಲ್ಲಾಪುರಕರ್, ಗಣೇಶ ನಾಯ್ಕ, ಪ್ರಕಾಶ ನಾಯ್ಕ ಇತರರಿದ್ದರು.