ಮುಂಡಗೋಡ: ಕೃಷಿ ಕಾಯ್ದೆ ಯಾವುದೆ ಕಾರಣಕ್ಕೂ ಜಾರಿಗೊಳಿಸಲು ಬಿಡುವುದಿಲ್ಲ. ಭೂಸುಧಾರಣಾ ಕಾಯ್ದೆ ತಿದ್ದುಪಡಿ ಏಕೆ ಮಾಡಲಾಗಿದೆ. ಇದು ಅಪಾಯಕಾರಿ ಕಾನೂನು. ರೈತರು ಚಳುವಳಿ ಮಾಡಲು ಹಕ್ಕು ಇದೆ. ಕೃಷಿ ಮಾರುಕಟ್ಟೆ ಕಾಯ್ದೆ ಭೂಸುಧಾರಣಾ ಕಾಯ್ದೆ ರದ್ದಾಗಿದೆ. ಇದರಿಂದ ರೈತರಿಗೆ ಕೊಡಲಿ ಪೆಟ್ಟು ಬಿದ್ದಿದೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಅವರು ಮಳಗಿ ಧರ್ಮಾಜಲಾಶಯಕ್ಕೆ ಭಾಗಿನ ಅರ್ಪಿಸಿ ರೈತ ಸಮಾವೇಶದ ಸಭೆಯನ್ನು ಉದ್ದೇಶಿಸಿ ಗುರುವಾರ ಮಾತನಾಡಿದರು.
ರೈತರು ದೇಶದಲ್ಲಿ ನಡೆಯುವ ವಿದ್ಯಮಾನಗಳನ್ನು ಸ್ಪಷ್ಟವಾಗಿ ಅರಿತಿರಬೇಕು. ದೊಡ್ಡ-ದೊಡ್ಡ ಕಾರ್ಪೋರೇಟ್‌ಗಳು ಬಂದು ಕೃಷಿ ಮಾಡಲೆಂದು ಸರ್ಕಾರ ರೈತ ಮಸೂದೆಗಳನ್ನು ಜಾರಿಗೆ ತಂದಿದೆ. ನಮ್ಮ ದೇಶದ ಕೋಟ್ಯಾಂತರ ಜನರು ಕೃಷಿಯನ್ನೇ ಆಧರಿಸಿದ್ದಾರೆ. ಕೃಷಿ ಮಾಡುವವರಿಗೆ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಸೂದೆ ವಾಪಸ್ ಪಡೆಯಬೇಕು. ಇದಕ್ಕಾಗಿ ಈಗಾಗಲೇ ಜನಾಂದೋಲನಕ್ಕೆ ಕರೆ ನೀಡಲಾಗಿದೆ. ಸಿಂಗ್ ಬಾರ್ಡರ್‌ನ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿ ಪ್ರತಿಭಟನೆ ನಡೆದು 9 ತಿಂಗಳು ಆಗಿದೆ. ರೈತರು ಯಾಕೆ ಒತ್ತಾಯ ತಂದಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿದುಕೊಳ್ಳಬೇಕು.
ಹದಿನಾರು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದ್ದು ಎಲ್ಲಿಯೂ ಕೃಷಿ ಕಾಯ್ದೆಯನ್ನು ಜಾರಿಗೆ ತಂದಿಲ್ಲ ಆದರೆ ರೈತ ನಾಯಕ ರೈತರ ಹೆಸರಿನ ಮೇಲೆ ಪ್ರಮಾಣ ವಚನ ಮಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದರು. ಅಲ್ಲದೆ ಕೃಷಿ ಮಾರುಕಟ್ಟೆ ಕಾಯ್ದೆಯನ್ನು ಕೂಡ ಜಾರಿಗೆ ತಂದು ರೈತರಿಗೆ ದ್ರೋಹ ಬಗೆದಿದ್ದಾರೆ. ಈ ಬಗ್ಗೆ ಗ್ರಾಮೀಣ ಭಾಗದ ರೈತರಿಗೆ ಅರಿವು ಮೂಡಿಲ್ಲ. ಈ ಬಗ್ಗೆ ಪ್ರತಿಯೊಬ್ಬ ರೈತರಿಗೂ ತಿಳುವಳಿಕೆ ನೀಡುವ ಕೆಲಸವಾಗಬೇಕು. ಅಲ್ಲದೆ ಕೃಷಿ ಮಾರುಕಟ್ಟೆಗಳು ಕೂಡ ದಿವಾಳಿಯಂಚಿನಲ್ಲಿದ್ದು ಮಾರುಕಟ್ಟೆಯಲ್ಲಿನ ಕೆಳ ವರ್ಗದ ಸಿಬ್ಬಂದಿಗಳಿಗೆ ವೇತನ ಸಿಗುತ್ತಿಲ್ಲ ಎಂದು ಮೂರೂ ಪಕ್ಷಗಳ ವಿರುದ್ಧ ಹರಿಹಾಯ್ದರು.
ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಮಾತನಾಡಿ, ಸುಮಾರು 14ಸಾವಿರ ಹೆಕ್ಟೇರ್ ಪ್ರದೇಶದಷ್ಟು ಜಮೀನು ಮುಳುಗಡೆಯಾಗಿ ನಿರ್ಮಿಸಲಾದ ಧರ್ಮಾ ಜಲಾಶಯದಿಂದ ಈ ಭಾಗದ ರೈತರು ನಿರಾಶ್ರಿತರಾದರು. 50-100ಎಕರೆ ಜಮೀನು ಕಳೆದುಕೊಂಡ ಕುಟುಂಬಗಳಿಗೆ ಕೇವಲ 5ಎಕರೆ ಜಮೀನು ಕೊಟ್ಟಿದ್ದಾರೆ. ಆದರೆ ಇವುಗಳಿಗೆ ಇನ್ನೂ ಹಕ್ಕು ಪತ್ರಗಳು ಸಿಕ್ಕಿಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಮತ್ತು ನೀರಾವರಿ ಇಲಾಖೆ ವಿಫಲವಾಗಿರುವುದು ಬೇಸರದ ಸಂಗತಿ ಎಂದರು.
ಶಿರಸಿ ತಾಲೂಕು ಅಧ್ಯಕ್ಷ ರಾಘವೇದ್ರ ನಾಯ್ಕ ಮಾತನಾಡಿ, ಮತ ಹಾಕುವುದು ಇಲ್ಲಿಯ ಶಾಸಕರಿಗೆ ಮತ್ತು ತಾ.ಪಂ. ಪ್ರತಿನಿಧಿಗಳಿಗೆ ಅಭಿವೃದ್ಧಿ ಮಾತ್ರ ಹಾನಗಲ್ಲ ತಾಲೂಕಿನ ಆಡಳಿತಕ್ಕೆ ಬರುತ್ತದೆ. ಎಲ್ಲಿ ಮತ ಹಾಕುತ್ತೇವೊ ಅಲ್ಲಿಯೇ ಅಭಿವೃದ್ಧಿ ಆಗುವ ಹಾಗೆ ಆಗಬೇಕು. ನಮಗೆ ಕೋಡಿಹಳ್ಳಿ ಚಂದ್ರಶೇಖರ ಅವರೇ ಮುಖ್ಯಮಂತ್ರಿ ಅವರಿದಂಲೇ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ನಮ್ಮ ರೈತ ಶಕ್ತಿ ತೋರಿಸಿಕೊಡುತ್ತೇವೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರೇ ನೀವು ಸಚಿವರಾದ ಮೇಲೆ ಅರಣ್ಯ ಇಲಾಖೆಯವರು ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದರಲ್ಲಿ ನಿಮ್ಮ ಕುಮ್ಮಕ್ಕು ಇದೆಯಾ ಅಥವಾ ಅರಣ್ಯ ಇಲಾಖೆಯವರಿಗೆ ಸವಲತ್ತು ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು. ರೈತರು ಬೆಳೆದ ಅನ್ನವನ್ನೇ ನೀವು ತಿನ್ನುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಹಾವೇರಿ ಜಿಲ್ಲೆ, ವಿವಿಧ ಜಿಲ್ಲೆಗಳ ರೈತ ಸಂಘಗಳ ಪದಾಧಿಕಾರಿಗಳು ಮತ್ತು ರೈತರು ಉಪಸ್ಥಿತರಿದ್ದರು.