ಶಿರಸಿ: ಇಬ್ಬರು ಸ್ವಾಮೀಜಿಗಳ ನಡುವೆ ಇಲ್ಲಿನ ವಿದ್ವಾಂಸ ಉಮಾಕಾಂತ ಭಟ್ಟ ಕೆರೇಕೈ ಅವರು ವಿದುರನಾಗಿ ಕಾಣಿಸಿಕೊಳ್ಳುವ ಅಪರೂಪದ ಪ್ರಸಂಗಕ್ಕೆ ಆ.30 ಸಾಕ್ಷಿಯಾಗಲಿದೆ.
ಉಡುಪಿ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರ 34ನೇ ಚಾತುರ್ಮಾಸ್ಯದ ಅಂಗವಾಗಿ ಅಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಮಧ್ಯಾಹ್ನ3:30ರಿಂದ ತಾಳ ಮದ್ದಲೆ ನಡೆಯಲಿದೆ.
ವಿದುರಾಥಿತ್ಯ ತಾಳ ಮದ್ದಲೆ ಇದಾಗಿದ್ದು, ಈ ಪ್ರಸಂಗದಲ್ಲಿ ಧರ್ಮರಾಜನಾಗಿ ಭಂಡಾರಕೇರಿಮಠದ ಪೀಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಕೃಷ್ಣನಾಗಿ ಪೇಜಾವರಮಠದ ವಿಶ್ವಪ್ರಸನ್ನ ತೀರ್ಥರು ಪಾತ್ರ ಕಟ್ಟಿಕೊಡಲಿದ್ದಾರೆ. ಇವರ ನಡುವೆ ವಿದುರನಾಗಿ ಶಿರಸಿ ಯ ವಿ.ಉಮಾಕಾಂತ ಭಟ್ಟ ಕೆರೇಕೈ ಹಾಗೂ ದ್ರೌಪದಿಯಾಗಿ ವಿ. ಎ.ಹರಿದಾಸ ಭಟ್ಟ ಬೆಂಗಳೂರು ಪಾಲ್ಗೊಳ್ಳಿದ್ದಾರೆ.
ಹಿಮ್ಮೇಳದಲ್ಲಿ ಅರ್ಜುನ ಕೋರ್ಡೆಲ್ ಬಳಗ ಸಹಕಾರ ಕೊಡಲಿದೆ. ವಿಶ್ವೇಶವಾಣಿ ಫೇಸ್ ಬುಕ್, ಯೂಟ್ಯೂಬ್ ಗಳಲ್ಲಿ ಇದು ನೇರ ಪ್ರಸಾರವಾಗಲಿದೆ.