ಶಿರಸಿ: ಕಾಡು ಪ್ರಾಣಿ ಸೆರೆ ಹಿಡಿಯಲು ಹಾಕಿದ್ದ ಉರುಳಿಗೆ ಕರಿ ಚಿರತೆ ಸಿಲುಕಿಕೊಂಡು ಮೃತ ಪಟ್ಟ ಘಟನೆ ತಾಲೂಕಿನ ಬೆಂಗಳೆ ಗ್ರಾಮದ ಮಂಟಕಾಲ ರಸ್ತೆ ಬಳಿ ನಡೆದಿದೆ.
ಬನವಾಸಿ ಅರಣ್ಯ ಭಾಗದಲ್ಲಿ ಪತ್ತೆಯಾದ ಪತ್ತೆಯಾದ ಮೊದಲ ಕಪ್ಪು ಚಿರತೆ ಇದಾಗಿದ್ದು, ಅಂದಾಜು 4 ವರ್ಷದ ಹೆಣ್ಣು ಚಿರತೆ ಎಂದು ಗುರುತಿಸಿದೆ. ಉರುಳು ತಂತಿಯಿಂದ ಸೊಂಟದ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮೃತಪಟ್ಟಿದೆ. ಪ್ರಾಣಿ ಬೇಟೆಗೆ ಉರುಳು ಹಾಕಿದವರ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.
ನಸುಕಿನ ಜಾವ ಕಪ್ಪು ಚಿರತೆಯು ಬೇಲಿಗೆ ಸಿಲುಕಿ ಒದ್ದಾಡುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು. ಅದನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಪ್ರಯತ್ನ ಅರಣ್ಯ ಇಲಾಖೆ ನಡೆಸುತ್ತಿದ್ದು, ಅಪಾರ ಪ್ರಮಾಣದಲ್ಲಿ ಜನರು ಸೇರಿದ್ದರು. ಹೀಗಾಗಿ ಚಿರತೆ ಭಯದಿಂದಲೂ ಮೃತಪಟ್ಟಿರಬಹುದು ಎಂದು ಆರ್.ಎಫ್.ಓ. ಉಷಾ ಕಬ್ಬೇರ ತಿಳಿಸಿದರು.
ಪಶು ವೈದ್ಯಾಧಿಕಾರಿ ಡಾ.ದಿನೇಶ ಕೆ.ಎನ್. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.