ನವದೆಹಲಿ: ದೇಶದಲ್ಲಿನ 50 ಮತ್ತು ಅದಕ್ಕಿಂತ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಎಲ್ಲಾ ಆಸ್ಪತ್ರೆಗಳು ಕಡ್ಡಾಯವಾಗಿ ಕನಿಷ್ಟ ಮಟ್ಟದ ಮಿನಿ ಆಕ್ಸಿಜನ್ ಪ್ಲ್ಯಾಂಟ್‍ಗಳನ್ನಾದರೂ ಹೊಂದಿರಬೇಕು ಎಂಬುದಾಗಿ ಆಸ್ಪತ್ರೆಗಳಲ್ಲಿ ಕನಿಷ್ಟ ಮಾನದಂಡಗಳ ಅನುಷ್ಠಾನಕ್ಕೆ ರಾಷ್ಟ್ರೀಯ ಸಮಿತಿಯಡಿಯಲ್ಲಿರುವ ಸರ್ಕಾರಿ ಸಮಿತಿ ಶಿಫಾರಸು ಮಾಡಿದೆ.
ಈ ಸಮಿತಿಯು ದೇಶದ ಎಲ್ಲಾ ಆಸ್ಪತ್ರೆಗಳು ತಮ್ಮಲ್ಲಿ ಲಭ್ಯವಿರುವ ಹಾಸಿಗೆಗಳ ಪೈಕಿ ಮೂರನೇ ಒಂದು ಭಾಗದಷ್ಟು ಹಾಸಿಗೆಗಳನ್ನು ಆಕ್ಸಿಜನ್ ಬೆಡ್‍ಗಳನ್ನಾಗಿ ಪರಿವರ್ತನೆ ಮಾಡುವಂತೆ ಸೂಚಿಸಿದೆ. ಕೇಂದ್ರ ಕ್ಲಿನಿಕಲ್ ಕಾಯ್ದೆ 2011 ರಂತೆ ಭಾರತದ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣ ಮಾಡುವ ಗುರಿಯನ್ನು ಹೊಂದಿದೆ. ಈ ಕಾಯ್ದೆಯನ್ನು ಈ ವರೆಗೆ 11 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳು ಅಳವಡಿಸಿಕೊಂಡಿವೆ ಎಂದು ಸಮಿತಿ ಹೇಳಿದೆ.
ಕೊರೋನಾ ಸಂಕಷ್ಟದ ಅವಧಿಯಲ್ಲಿ ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಾಗಿತ್ತು. ಆಕ್ಸಿಜನ್‍ಗೆ ಬೇಡಿಕೆ ಹೆಚ್ಚಾಗಿತ್ತು. ಈ ಸಮಸ್ಯೆ ಉಂಟಾದ ಬಳಿಕ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲ್ಯಾಂಟ್‍ಗಳನ್ನು ಹೊಂದುವುದು ಉತ್ತಮ ಎಂದು ಸಮಿತಿ ಹೇಳಿದೆ. ಹಾಗೆಯೇ 50 ಕ್ಕಿಂತ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗಳು ಕಡ್ಡಾಯವಾಗಿ ಆಕ್ಸಿಜನ್ ಪ್ಲ್ಯಾಂಟ್‍ಗಳನ್ನು ಹೊಂದಬೇಕು ಎಂದು ಶಿಫಾರಸ್ಸಿನಲ್ಲಿ ಸಮಿತಿ ತಿಳಿಸಿದೆ.