ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯನ್ವಯ ಉದ್ದು ಮತ್ತು ಹೆಸರು ಖರೀದಿಗೆ ಕೇಂದ್ರ ಸರ್ಕಾರದ ಕೃಷಿ ಸಚಿವಾಲಯ ಅನುಮೋದಿಸಿದೆ.
ಈ ಯೋಜನೆಯಡಿಯಲ್ಲಿ ಗರಿಷ್ಠ 30 ಸಾವಿರ ಮೆಟ್ರಿಕ್ ಟನ್ ಹೆಸರು, ಹಾಗೆಯೇ ಗರಿಷ್ಠ 10 ಸಾವಿರ ಮೆಟ್ರಿಕ್ ಟನ್ ಉದ್ದು ಖರೀದಿಸಲು ಅನುಮತಿ ನೀಡಲಾಗಿದೆ.
ಈ ಸಂಬಂಧ ಕರ್ನಾಟಕ ಸರ್ಕಾರ ನಿಗದಿ ಮಾಡುವ ದಿನದಿಂದ 90 ದಿನಗಳ ವರೆಗೆ ಈ ಪ್ರಕ್ರಿಯೆ ಜಾರಿಯಲ್ಲಿರಲಿದೆ ಎಂದು ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಆ ಮೂಲಕ ಉದ್ದು ಮತ್ತು ಹೆಸರು ಬೆಳೆಯುವ ಕೃಷಿಕರಿಗೆ ಸಹಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಅನುಮೋದನೆ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ, ಕರ್ನಾಟಕದಲ್ಲಿ 2021-22 ರ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಹೆಸರು ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸಂತಸ ತಂದಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಕೃಷಿ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಗರಿಷ್ಠ 30 ಸಾವಿರ ಮೆಟ್ರಿಕ್ ಟನ್ ಹೆಸರು ಹಾಗೂ ಗರಿಷ್ಠ 10 ಸಾವಿರ ಮೆಟ್ರಿಕ್ ಟನ್ ಉದ್ದು ಖರೀದಿಗೆ ಅನುಮತಿ ನೀಡಲಾಗಿದೆ. ಕರ್ನಾಟಕ ಸರ್ಕಾರ ನಿಗದಿ ಪಡಿಸುವ ದಿನಾಂಕದಿಂದ 90 ದಿನಗಳ ಅವಧಿಗೆ ಈ ಖರೀದಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ’ ಎಂದಿದ್ದಾರೆ.