ಬೆಂಗಳೂರು: ಸಂಸದೀಯ ಮೌಲ್ಯಗಳ ಕುಸಿತ ತಡೆಯುವ ನಿಟ್ಟಿನಲ್ಲಿ ‘ಆತ್ಮಾವಲೋಕನ ಕಾರ್ಯಕ್ರಮ’ದ ಮುಂದುವರೆದ ಭಾಗವಾಗಿ ಗುರುವಾರ ಬೆಂಗಳೂರಿನಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳ ಜೊತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆ ನಡೆಸಿ ಚರ್ಚಿಸಿದರು.
ಅಧಿವೇಶನಕ್ಕೆ ಹಾಜರಾಗುವ ಮುನ್ನ ಸದಸ್ಯರಲ್ಲಿ ಶಿಸ್ತು, ಉತ್ತಮ ನಡವಳಿಕೆ ಹಾಗೂ ಘನತೆಯನ್ನು ಬೆಳೆಸುವುದು ಆಯಾ ರಾಜಕೀಯ ಪಕ್ಷಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿದ್ದು, ಗದ್ದಲ ನಡೆಸುವ ಸದಸ್ಯರನ್ನು ಉಳಿದ ಅಧಿವೇಶನಕ್ಕೆ ಬಹಿಷ್ಕರಿಸಬೇಕು. ಶಾಸಕಾಂಗದ ಘನತೆಗೆ ಕುಂದು ತರುವಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಕಾರ್ಯವಿಧಾನದ ನಡವಳಿಗೆ ಸೂಕ್ತ ತಿದ್ದುಪಡಿ ತರಬೇಕೆಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು ಹಾಗೂ ಸಭೆಯಲ್ಲಿ ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಯಿತು.
ಆತ್ಮಾವಲೋಕನ ಸಭೆಯಲ್ಲಿ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡಿ ಎಚ್ ಶಂಕರಮೂರ್ತಿ ಮತ್ತು ವಿ ಆರ್ ಸುದರ್ಶನ್, ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ, ಮಾಜಿ ಸಚಿವ ಪಿಜಿ ಆರ್. ಸಿಂಧಿಯಾ ಮತ್ತು ಎಸ್. ಸುರೇಶ್ ಕುಮಾರ್, ಶಾಸಕ ಎ ಟಿ ರಾಮಸ್ವಾಮಿ ಮತ್ತು ಹೆಚ್ ಕೆ ಕುಮಾರಸ್ವಾಮಿ ಭಾಗವಹಿಸಿದ್ದರು.