ಶಿರಸಿ: ಮನುವಿಕಾಸ ಸ್ವಯಂ ಸೇವಾ ಸಂಸ್ಥೆಯು ಅಜೀಮ್ ಪ್ರೇಮ್‍ಜಿ ಫೀಲಾಂತ್ರಫಿಕ್ ಇನಿಶಿಯೇಟಿವ್ ಸಹಯೋಗದಲ್ಲಿ ನಗರದ ಮಧುವನ ಹೋಟೆಲ್‍ನಲ್ಲಿ ಆ.25 ರಂದು ರೈತ ಮಹಿಳೆಯರಿಗಾಗಿ ಒಂದು ದಿನದ ಸುಸ್ಥಿರ ಕೃಷಿ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿತ್ತು.
ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಶಿವಶಂಕರ ಮೂರ್ತಿ ಮಾತನಾಡಿ ಅನಾದಿಕಾಲದಿಂದಲೂ ಮಹಿಳೆಯರು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಸದಾ ಪುರುಷರ ಸಮಾನರಾಗಿ ಕಾರ್ಯನಿರ್ವಹಿಸುತ್ತಿದ್ದು ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಅಪಾರ, ಮನೆಯ ಕೆಲಸದ ನಿರ್ವಹಣೆಯ ಜೊತೆಗೆ ಸ್ವಾವಲಂಬನೆಯನ್ನು ಸಾಧಿಸಿ ತೋರಿಸಿದ ಹಿರಿಮೆ ಮಹಿಳೆಯರಿಗಿದೆ. ಹಾಗೆಯೇ ಕೃಷಿಯ ವಲಯದಲ್ಲಿ ತಂತ್ರಜ್ಞಾನದ ಬದಲಾವಣೆಯಾದಂತೆ ರೈತರು ಬೆಳೆಯುವ ಬೆಳೆಗಳಲ್ಲಿಯೂ ಬದಲಾವಣೆ ಆಗಬೇಕಿದೆ. ಸುಸ್ಥಿರ ಕೃಷಿಯು ಮುಂದಿನ ತಲೆಮಾರಿಗೆ ವರದಾನವಿದ್ದಂತೆ. ಮನೆಯ ಅಭಿವೃದ್ಧಿಯ ಜೊತೆಗೆ ಮಹಿಳೆ ಸಮುದಾಯದ ಸಬಲೀಕರಣಕ್ಕೂ ಕೂಡ ಮಾದರಿಯೇ ಸರಿ”ಎಂದರು.
ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞೆ ಡಾ. ರೂಪಾ ಎಸ್ ಪಾಟೀಲ್ ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಬೆಳೆಗಳ ಮೇಲೆ ಉಂಟಾಗುವ ಕೀಟಬಾಧೆಗಳ ಕುರಿತಾಗಿ ಮಾಹಿತಿ ನೀಡುತ್ತಾ, ಇತ್ತೀಚೆಗೆ ಭತ್ತದ ಬೆಳೆಗಳಿಗೆ ಮಿಡತೆ ಹುಳುವಿನ ಕಾಟ ಸಮಸ್ಯೆಗಳು ಮತ್ತು ಅದಕ್ಕಿರುವ ಸಾವಯವ ಪದ್ದತಿಗಳ ಪರಿಹಾರೋಪಾಯಗಳನ್ನು ವಿವರಿಸಿದರು. ಅಲ್ಲದೆ ಸೈನಿಕ ಹುಳು, ಗಣ್ಣು ಹುಳು, ಕೆಂಪು ಹುಳುಗಳ ಉಪಟಳವನ್ನು ನಿಯಂತ್ರಿಸುವ ಬಗೆಗೆ ರೈತ ಮಹಿಳೆಯರಿಗೆ ಮಾಹಿತಿ ನೀಡಿದರು. ಕೃಷಿಯಲ್ಲಿ ಮಹಿಳಾ ಸ್ವಾವಲಂಬನೆಗೆ ಹತ್ತು ಹಲವಾರು ಅವಕಾಶಗಳಿದ್ದು ಆಯಾ ಕ್ಷೇತ್ರದಲ್ಲಿ ಅನುಭವವುಳ್ಳ ಮಹಿಳೆಯರು ತಮಗಿಷ್ಠವಾದ ವಲಯವನ್ನು ಆಯ್ಕೆ ಮಾಡಿಕೊಂಡು ಪ್ರಗತಿ ಸಾಧಿಸಿ ಆರ್ಥಿಕವಾಗಿಯೂ ಸಬಲರಾಗಬೇಕು”ಎಂದರು.
ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಶಂಕರ್ ಹೆಗಡೆ ಮಾತನಾಡಿ ಮಣ್ಣು ಹಾಗೂ ಮಣ್ಣಿನ ಮಹತ್ವ, ಕೃಷಿ ಕ್ಷೇತ್ರದಲ್ಲಿ ಮಣ್ಣಿನ ಪಾತ್ರ, ಮಣ್ಣು ಪರೀಕ್ಷೆಯ ಮಹತ್ವ, ಕೃಷಿ ಭೂಮಿಯ ಗುಣಲಕ್ಷಣಗಳನ್ನು ತಿಳಿದುಕೊಂಡು ಅವರವರ ಕೃಷಿ ಭೂಮಿಗೆ ಅವರವರೇ ಪರಿಣಿತರಾಗಬೇಕು ಹಾಗಾದಾಗ ಮಾತ್ರ ಕೃಷಿ ವಲಯದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದರು.
ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ಮಾತನಾಡಿ ಮನುವಿಕಾಸ ಸ್ವಯಂ ಸೇವಾ ಸಂಸ್ಥೆಯು ಕಳೆದ 18 ವರ್ಷಗಳಿಂದ ನೆಲ-ಜಲ ಸಂರಕ್ಷಣೆ, ಪರಿಸರ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಹಲವಾರು ಕಾರ್ಯಚಟುವಟಿಕೆಗಳನ್ನು ರೂಪಿಸಿದ್ದು, ಈಗಾಗಲೇ ಉತ್ತರ ಕನ್ನಡ, ಹಾವೇರಿ, ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅವಸಾನದ ಅಂಚಿನಲ್ಲಿರುವ ಕೆರೆಗಳ ಪುನರುಜ್ಜೀವನಗೊಳಿಸಿ ರೈತ ಸಮುದಾಯಕ್ಕೆ ನೀರಿನ ದಾಹವನ್ನು ನೀಗಿಸಿದೆ. ಮಹಿಳಾ ಸಬಲೀಕರಣವನ್ನೇ ಮುಖ್ಯ ಗುರಿಯಾಗಿಸಿಕೊಂಡು ಕೆಲಸಮಾಡುತ್ತಿರುವ ನಮ್ಮ ಸಂಸ್ಥೆ ಮಹಿಳೆಯರು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಬೇಕಾದ ಕೌಶಲ್ಯ ಆಧಾರಿತ ತರಬೇತಿಗಳನ್ನು ಆಯೋಜಿಸಿ ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದರ ಪ್ರಯೋಜನ ಪಡೆದು ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಾಗ ಮಾತ್ರ ಸಂಸ್ಥೆಯ ಉದ್ದೇಶ ಈಡೇರಿದಂತೆ” ಎಂದರು.
ಪ್ರಗತಿಮಿತ್ರ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ್ ಹೆಗಡೆ ಮಾತನಾಡಿ ನಾವು ಬೆಳೆಯುವ ಬೆಳೆಗಳ ಗುಣಮಟ್ಟ ಚೆನ್ನಾಗಿದ್ದೂ ಮಾರುಕಟ್ಟೆಯಲ್ಲಿ ಅದರ ನಿರೀಕ್ಷಿತ ಬೆಲೆ ರೈತರಿಗೆ ಸಿಗುತ್ತಿಲ್ಲ, ಅದಕ್ಕೆ ನಾವು ಬೆಳೆಯುವ ಬೆಳೆಗಳ ಮೌಲ್ಯವರ್ಧನೆ ಆಗಬೇಕಿದೆ, ಅದಕ್ಕಾಗಿ ಪ್ರತಿ ರೈತ ಸಮುದಾಯವೂ ಚಿಂತನೆ ನಡೆಸುವುದು ಅನಿವಾರ್ಯವಾಗಿದೆ. ರೈತ ಉತ್ಪಾದಕ ಸಂಘಗಳ ಸ್ಥಾಪನೆಯ ಮೂಲಕ ರೈತ ಸಮುದಾಯದ ಏಳಿಗೆ ಸಾಧ್ಯ, ನಮಗೆ ಎದುರಾಗಿರುವ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳುವ ಗುಣ ಪ್ರತೀ ರೈತರಲ್ಲೂ ಬಂದಾಗ ಮಾತ್ರ ಸುಸ್ಥಿರ ಕೃಷಿಯ ಪರಿಕಲ್ಪನೆ ಯಶಸ್ವಿಯಾಗುತ್ತದೆ ಎಂದರು.
ಕಾರ್ಯಾಗಾರದಲ್ಲಿ 60 ಕ್ಕೂ ಹೆಚ್ಚು ರೈತ ಮಹಿಳೆಯರು ಸುಸ್ಥಿರ ಕೃಷಿಯ ಮಹತ್ವ ಮತ್ತು ಪ್ರಯೋಜನಗಳನ್ನು ಪಡೆದರು. ಮನುವಿಕಾಸ ಸಂಸ್ಥೆಯ ತಾಲೂಕಾ ಸಂಯೋಜಕ ಅಶ್ವತ್ಥ ನಾಯ್ಕ ನಿರೂಪಿಸಿದರು. ಶ್ರೀಕಾಂತ ಹೆಗಡೆ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಶುಭಾ ಪೈ ಮತ್ತು ಶಿಲ್ಪಾ ಶಾಸ್ತ್ರಿ ಪ್ರಾರ್ಥಿಸಿದರು.
ಕಾರ್ಯಾಗಾರದಲ್ಲಿ ಮನುವಿಕಾಸ ಸಂಸ್ಥೆಯ ಸಿಬ್ಬಂದಿಗಳಾದ ರಾಘವೇಂದ್ರ ಭಟ್, ಮಣಿಕಂಠ ಚಲವಾದಿ, ಗಣಪತಿ ಗಾಮದ್, ಪವನ ಬೊಮ್ಮನಹಳ್ಳಿ, ಗಣಪತಿ ಹೆಗಡೆ ಸೇರಿದಂತೆ ಹಲವು ಗ್ರಾಮಗಳ ರೈತ ಮುಖಂಡರುಗಳು ಉಪಸ್ಥಿತರಿದ್ದರು.