ಶಿರಸಿ: ಯೋಗಾಭ್ಯಾಸ ಮನುಷ್ಯನ ಅಂತಃಶಕ್ತಿಯ ಉದ್ದೀಪಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ ಎಂದು ಯೋಗಗುರು ನಯನಾ ಎಸ್.ಭಟ್ಟ ಹೇಳಿದರು.
ನಗರದ ಆದರ್ಶ ವನಿತಾ ಸಮಾಜದ 46ನೇ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇಡೀ ವಿಶ್ವಕ್ಕೆ ದೇಶ ಕೊಟ್ಟ ಕೊಡುಗೆ ಯೋಗ. ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯಕ್ಕೆ ಯೋಗಾಭ್ಯಾಸ ಬೇಕು. ಯೋಗ ದಿನದಂದು ಮಾತ್ರವಲ್ಲದೇ ಪ್ರತಿದಿನವೂ ಪ್ರತಿಯೊಬ್ಬನು ಯೋಗಾಸನ ಮಾಡಿದರೆ ಇಡೀ ಸಮಾಜಕ್ಕೆ ರೋಗ ನಿರೋಧಕ ಶಕ್ತಿ ದೊರೆತು ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ ಎಂದರು.
ವನಿತಾ ಸಮಾಜದ ಅಧ್ಯಕ್ಷೆ ಸೀತಾ ಕೂರ್ಸೆ ಮಾತನಾಡಿ, ಯಾರಲ್ಲಿಯೂ ಮುನಿಸಿಲ್ಲದೇ ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಂಡರೆ ಏನನ್ನಾದರೂ ಸಾದಿಸಬಹುದು ಎಂದರು.
ವನಿತಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ವಾಸಂತಿ ಹೆಗಡೆ ಮಾತನಾಡಿ, 46ವರ್ಷದಿಂದ ಈ ಸಮಾಜ ಕ್ರೀಯಾಶೀಲವಾಗಿ ನಡೆಯುತ್ತಿದೆ. ಸದಸ್ಯರೆಲ್ಲಾ ಒಗ್ಗಟ್ಟಿನಿಂದ ಕಾರ್ಯ ಮಾಡುತ್ತಿರುವುದು ಸಾಧನೆ ಸಾಧ್ಯವಾಗಿದೆ ಎಂದರು.
ಸಾಹಿತಿ ಭಾಗೀರಥಿ ಹೆಗಡೆ ಮಾತನಾಡಿ, ಸಾಧನೆಗೆ ಧೈರ್ಯ, ಶ್ರದ್ಧೆ, ಪರಿಶ್ರಮ ಮತ್ತು ಪ್ರಾಮಾಣಿಕತೆ ಬೇಕು. ಈ ರೀತಿಯಲ್ಲಿ ಸಾಧನೆ ಮಾಡಿದವರು ಹಲವರಿದ್ದಾರೆ ಎಂದರು. ಶೋಭಾ ಕುಲಕರ್ಣಿ ಅನಿಸಿಕೆ ವ್ಯಕ್ತಪಡಿಸಿದರು.
ಉಷಾ ಶಹಾಣೆ ವರದಿ ವಾಚಿಸಿದರು. ವಿಜಯಲಕ್ಷ್ಮೀ ನಾಡಿಗೇರ ಸನ್ಮಾನಪತ್ರ ವಾಚಿಸಿದರು. ರೇಖಾ ಭಟ್ಟ ನಿರೂಪಿಸಿದರು. ಇದಕ್ಕೂ ಪೂರ್ವದಲ್ಲಿ ಲಲಿತಾ ಸಹಸ್ರನಾಮ ಪಠಣ, ಶ್ರಾವಣಮಾಸದ ಅರಿಶಿಣ ಕುಂಕುಮ ಕಾರ್ಯಕ್ರಮ ನೆರವೇರಿತು. ಸಂಸ್ಥೆಯ ಸದಸ್ಯರಿಂದ ಗಾಯನ, ಭಜನೆ, ಹಾಸ್ಯ, ಕವನ, ವಾಚನ, ನೃತ್ಯ, ಯೋಗಾಸನ ಪ್ರದರ್ಶನ ಒಳಗೊಂಡ ಸಾಂಸ್ಕøತಿಕ ಕಾರ್ಯಕ್ರಮ ಮನರಂಜಿಸಿತು.