ಶಿರಸಿ: ಮನುಷ್ಯನಿಗೆ ತೃಪ್ತಿಯನ್ನು ಕೊಡುವಂತದ್ದು ಹೊಟ್ಟೆಯಲ್ಲ, ಬದಲಿಗೆ ಆತನ ಸಂಸ್ಕಾರ. ಸಾರ್ವಕಾಲಿಕ ತೃಪ್ತಿ ದೊರೆಯುವುದು ಸಂಸ್ಕೃತಿಯಿಂದಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಸೋಮವಾರ ನಗರದ ಲಯನ್ಸ್ ಶಾಲೆಯಲ್ಲಿ ರೂಟ್ಸ್ ಟು ರೂಟ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಯಾವುದೋ ಒಂದೆರಡು ಶಾಲೆಗಳಿಗೆ ಕಂಪ್ಯೂಟರ್ ಕೊಡುವುದು ಅಥವಾ ಹೊಟ್ಟೆಪಾಡಿಗಾಗಿ ವಿದ್ಯೆಯನ್ನು ಹೇಳಿಕೊಡುವುದಾಗಿದೆ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಈ ಸಮಾಜಕ್ಕೆ ಶಕ್ತಿಯನ್ನು ತುಂಬುವ ಕೆಲಸ ರೂಟ್ಸ್ ಟು ರೂಟ್ಸ್ ನಂತಹ ಕೆಲವೇ ಕೆಲವು ಸಂಸ್ಥೆಗಳಿಂದಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಶಿರಸಿ ತಾಲೂಕಿನ 52 ಸರಕಾರಿ ಶಾಲೆಗಳಿಗೆ ಟಿ.ವಿ ಹಾಗು ವೆಬ್ ಕ್ಯಾಮೆರಾ ನೀಡುವ ಮೂಲಕ ಡಿಜಿಟಲ್ ಕಲಿಕೆಗೆ ಅವಕಾಶ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಜಿಲ್ಲೆಯ ಸಮಸ್ತ ಶಾಲೆಗಳಿಗೆ ಈ ಅನುಕೂಲ ದೊರೆಯುವಂತಾಗಲಿ ಎಂದರು.
ರೂಟ್ಸ್ ಟು ರೂಟ್ಸ್ ಸಂಸ್ಥೆಯ ಸಂಸ್ಥಾಪಕರಾದ ರಾಕೇಶ್ ಗುಪ್ತಾ ಮಾತನಾಡಿ, ಎನ್ನುವುದು ಸರಕಾರೇತರ ಸಂಸ್ಥೆಯಾಗಿದ್ದು, ಕಲೆ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ 52 ಶಾಲೆಗಳಲ್ಲಿ ಡಿಜಿಟಲ್ ಸಾಂಸ್ಕೃತಿಕ ಶಿಕ್ಷಣ ಕಾರ್ಯಕ್ರಮವನ್ನು ನಾವು ಜೋಡಿಸಿಕೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.
ಡಿಡಿಪಿಐ ದಿವಾಕರ ಶೆಟ್ಟಿ ಪ್ರಸ್ತಾವಿಕ ಮಾತನಾಡಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲೆಗಳಿಗೆ ದೆಹಲಿಯ ರೂಟ್ಸ್ ಟೂ ರೂಟ್ಸ್ ವಿರ್ಸಾ ವತಿಯಿಂದ ಉಚಿತವಾಗಿ ಟಿವಿ ನೀಡಿದ್ದು ಸಂತಸದ ವಿಚಾರವಾಗಿದೆ. ವಿದ್ಯಾರ್ಥಿಗಳಿಗೆ ಇದರ ನೇರ ಪ್ರಯೋಜನ ದೊರೆಯುವಂತೆ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಎಸ್ ಹೆಗಡೆ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಂದನ ಸಾಗರ, ರೂಟ್ಸ್ ಟು ರೂಟ್ಸ್ ಸಂಸ್ಥೆಯ ಗುರುಪ್ರೀತ್ ಕೌರ್ ಸೇರಿದಂತೆ ಇನ್ನಿತರರು ಇದ್ದರು.
ಕಾರ್ಯಕ್ರಮದ ಆರಂಭದಲ್ಲಿ ಲಯನ್ಸ್ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಹಾಗು ಶಾಲೆಯ ವಿದ್ಯಾರ್ಥಿನಿ ತುಳಸಿ ಬೆಟ್ಟಕೊಪ್ಪ ಇವಳಿಂದ ಯಕ್ಷಗಾನ ನೃತ್ಯ ನಡೆಯಿತು.