ಕುಮಟಾ: ತಾಲೂಕಿನಾದ್ಯಂತ ಸೋಮವಾರದಿಂದ ಶಾಲಾ-ಕಾಲೇಜುಗಳು ಪ್ರಾರಂಭಗೊಂಡಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಪ್ರೌಢಶಾಲೆ ವಿಭಾಗದಲ್ಲಿ ಇಲ್ಲಿನ 35 ಪ್ರೌಢಶಾಲೆಯೂ ಆರಂಭಗೊಂಡಿದೆ.
ಕೋವಿಡ್‍ನಿಂದಾಗಿ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜುಗಳು ಸೋಮವಾರದಿಂದ 9 ರಿಂದ 12 ನೇ ತರಗತಿಯವರೆಗೆ ಆರಂಭಗೊಂಡಿವೆ. ಈ ಪ್ರಯುಕ್ತ ವಿವಿಧ ಪ್ರೌಢಶಾಲೆ ಹಾಗೂ ಕಾಲೇಜಿನ ಪ್ರವೇಶದ್ವಾರವನ್ನು ಹೂಗಳಿಂದ ಅಲಂಕರಿಸಿ, ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜುಗೊಳಿಸಿರುವುದು ಕಂಡುಬಂತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕಾನಿಂಗ್ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಹಾಕಿ, ವಿವಿಧ ವಾದ್ಯದೊಂದಿಗೆ ಹೂ ನೀಡುವ ಮೂಲಕ ಸ್ವಾಗತಿಸಿ, ವಿದ್ಯಾರ್ಥಿಗಳಲ್ಲಿ ಅತ್ಮಸ್ಥೈರ್ಯ ತುಂಬಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದರೂ, ತರಗತಿಗಳಲ್ಲಿ ಒಂದು ಬೆಂಚಿಗೆ ಇಬ್ಬರನ್ನು ಕೂರಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು.
ಪ್ರೌಢಶಾಲೆಯ ವಿವರ: ತಾಲೂಕಿನ ಒಟ್ಟೂ 35 ಪ್ರೌಢಶಾಲೆಗಳಲ್ಲಿ 4499 ವಿದ್ಯಾರ್ಥಿಗಳಿದ್ದು, ಪ್ರಥಮ ದಿನದಂದು ಆನ್‍ಲೈನ್ ಮೂಲಕ ಶಿಕ್ಷಣ ಪಡೆಯುತ್ತಿದ್ದ 970 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿರಲಿಲ್ಲ. ಗ್ರಾಮೀಣ ಭಾಗದ 101 ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಉಳಿದ 3428 ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ಆಗಮಿಸಿದ್ದರು.
ಶಾಲಾ-ಕಾಲೇಜುಗಳ ಆರಂಭಕ್ಕೆ ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳೂ ಸಹ ಉತ್ಸಾಹದಿಂದ ಶಾಲೆಗೆ ಆಗಮಿಸಿದ್ದಾರೆ. ಇನ್ನು ಗ್ರಾಮೀಣ ಭಾಗದ ಕೆಲವು ವಿದ್ಯಾರ್ಥಿಗಳಿಗೆ ನೆಟ್‍ವರ್ಕ್ ಸಮಸ್ಯೆಯಿಂದ ಆನ್‍ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಲಾಗುವುದು.
– ರಾಜೇಂದ್ರ ಭಟ್ಟ (ಕ್ಷೇತ್ರ ಶಿಕ್ಷಣಾಧಿಕಾರಿ)