ಶಿರಸಿ: ಮುಂದಿನ ಹತ್ತು ದಿನದಲ್ಲಿ ಕೊರೊನಾ ಪರಿಸ್ಥಿತಿಯ ಬಗ್ಗೆ ನೋಡಿಕೊಂಡು ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆ ಸಂಬಂಧ ಹೊಸ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಹಬ್ಬದ ಆಚರಣೆಗೆ ಕಠಿಣ ನಿರ್ಬಂಧ ವಿಧಿಸದಂತೆ ಈಗಾಗಲೆ ಗಣೇಶೋತ್ಸವ ಸಮಿತಿ ಪ್ರಮುಖರ ನಿಯೋಗ ತಮ್ಮನ್ನು ಭೇಟಿ ಮಾಡಿದೆ. ಜನರ ಒತ್ತಾಯವನ್ನು ಸರ್ಕಾರಕ್ಕೂ ತಿಳಿಸಲಾಗಿದೆ. ಕೋವಿಡ್ ಮುಂದಿನ ಸ್ಥಿತಿ ಗಮನಿಸಿ ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ’ ಎಂದರು.
‘ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಿರಸಿಯಲ್ಲಿ ಕೋವಿಡ್ ಪತ್ತೆ ಪ್ರಯೋಗಾಲಯ ಶೀಘ್ರ ಕಾರ್ಯಾರಂಭಿಸಲಿದೆ. ಶಾಲೆಗಳಲ್ಲಿಯೂ ಕೋವಿಡ್ ನಿಯಮ ಪಾಲಿಸಿ ತರಗತಿ ಆರಂಭಿಸಲಾಗಿದೆ. ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗಿರುವ ಎರಡು ಸಾವಿರದಷ್ಟು ರೈತರಿಗೆ ಬಿಡುಗಡೆ ಆಗಬೇಕಿರುವ ಮೊತ್ತವನ್ನು ಶೀಘ್ರ ದೊರಕುವಂತೆ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿದ್ದೇನೆ. ವಾರದೊಳಗೆ ಸಕಾರಾತ್ಮಕ ಫಲಿತಾಂಶ ಕಂಡುಕೊಳ್ಳಲಿದ್ದೇವೆ’ ಎಂದರು.