• Slide
  Slide
  Slide
  previous arrow
  next arrow
 • ಶಿವರಾತ್ರಿಯಂದು ಮಾಡಿ ‘ಪಂಚಲಿಂಗ ಪರಿಕ್ರಮ’ ಪಂಚತತ್ವ ಸಾರುವ ಶಿವಲಿಂಗಗಳೆಲ್ಲಿವೆ ನೋಡಿ..

  300x250 AD

  euttarakannada: ಶಿವರಾತ್ರಿ ವಿಶೇಷ: ಶಿವರಾತ್ರಿಯ ಮಹತ್ವ ಹಿಂದೂಗಳ ಅನೇಕ ಹಬ್ಬಗಳಲ್ಲಿ ಶಿವರಾತ್ರಿಯು ವಿಶಿಷ್ಟ ಸ್ಥಾನ ಪಡೆದಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಕೊನೆಯ ಹಬ್ಬವಾಗಿದ್ದು, ವಿಶೇಷ ಪ್ರಾಧಾನ್ಯತೆಗಳಿಂದ ಕೂಡಿದೆ.

  ಆ ದಿನ ಉಪವಾಸ (ಹತ್ತಿರವಿದ್ದು ಧ್ಯಾನಿಸುವ ಸಂಕೇತ), ಜಾಗರಣೆ (ಎಚ್ಚರದೆಡೆಗೆ, ತಿಳುವಳಿಕೆಯಡೆಗೆ ಸಾಗುವ ಸಂಕೇತ) ಗಳೊಂದಿಗೆ ಶುಭಕರನೂ ಮಂಗಳಕರನೂ ಆದ ಈಶ್ವರನ ದರ್ಶನ, ಆರಾಧನೆಗಳ ಮೂಲಕ ಅಂತರಂಗದ ಅಜ್ಞಾನದ ಅಂಧಕಾರವನ್ನು ದೂರಗೊಳಿಸಲು ಸಂಕಲ್ಪಿಸುವ ಸುದಿನ.

  ಶಿವರಾತ್ರಿಯೆಂದರೆ: ಲೋಕಕಲ್ಯಾಣಕ್ಕಾಗಿ ಶಿವ-ಪಾರ್ವತಿಯರು ಕಲ್ಯಾಣವಾದ ಸುದಿನ. ಸಮುದ್ರ ಮಂಥನದಲ್ಲಿ ಉತ್ಪತ್ತಿಯಾದ ವಿಷವನ್ನು ಶಿವನು ಕುಡಿದ ದಿನ. ಶಿವ ರುದ್ರತಾಂಡವ ಮಾಡಿದ ದಿನ. ಶಿವನ ಆದಿ-ಅಂತ್ಯವನ್ನು ಹುಡುಕಿದ ಬ್ರಹ್ಮ ಮತ್ತು ವಿಷ್ಣುವಿಗೆ ಲಿಂಗರೂಪದಲ್ಲಿ ದರ್ಶನವಿತ್ತ ದಿನ. ಭಗೀರಥನ ಭಕ್ತಿಗೆ ಮೆಚ್ಚಿ ಶಿವನ ಜಟೆಯಿಂದ ಭೂಮಿಗೆ ಗಂಗೆಯನ್ನು ಹರಿಸಿದ ದಿನ. ಬೇಡರ ಕಣ್ಣಪ್ಪನ ಮುಗ್ಧ ಭಕ್ತಿಗೆ ಶಿವ ಒಲಿದ ದಿನ.

  ಹಿಮಾಲಯದಲ್ಲಿರುವ ಪವಿತ್ರ ಕ್ಷೇತ್ರಗಳಾದ ಕೈಲಾಸ, ಮಾನಸ ಸರೋವರ ಮತ್ತು ಕೇದಾರ ಬದರಿ ಚಾರ್‍ಧಾಮ್ ಯಾತ್ರೆಗಳನ್ನು ಯಶಸ್ವಿಯಾಗಿ ಕೈಗೊಂಡ ಶಿರಸಿಯ ವೈದ್ಯರು ಮತ್ತು ಮಿತ್ರರ ತಂಡ ಕಳೆದ ವರ್ಷ ಶಿವರಾತ್ರಿಯಂದು ಶ್ರೀಯುತ ನಾಗಭೂಷಣ್, ದಾವಣಗೆರೆಯವರ ಮಾರ್ಗದರ್ಶನದಲ್ಲಿ ಪಂಚಲಿಂಗದರ್ಶನ ಯಾತ್ರೆಯನ್ನು ಕೈಗೊಂಡಿತ್ತು. ಶಿರಸಿಯ ಸಮೀಪದಲ್ಲಿಯೇ ಇರುವ ವಿಶಿಷ್ಟವಾದ ಈ ಶಿವ ಸಾನ್ನಿಧ್ಯಗಳ ಮಹತ್ವವನ್ನು ತಿಳಿಸುವುದು ಈ ಲೇಖನದ ಉದ್ದೇಶ.

  ಉತ್ತರ ಕನ್ನಡ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ಭಾಗಗಳಲ್ಲಿ ಹರಡಿರುವ ಈ ಭೂ ಭಾಗಗಳು 6ನೇ ಶತಮಾನದಿಂದ 17ನೇ ಶತಮಾನದವರೆಗೆ ಕದಂಬರು, ಚಾಲುಕ್ಯರು ಮತ್ತು ಮರಾಠರ ಆಡಳಿತಕ್ಕೆ ಒಳಪಟ್ಟಿತ್ತು. ಈ ಭಾಗಗಳಲ್ಲಿ ಇರುವ ಅನೇಕ ಶಿಲಾದೇವಾಲಯಗಳು ಅಂದಿನ ಅರಸರ ಸಾಹಸ ಪ್ರವೃತ್ತಿಗೆ, ಕಲಾತ್ಮಕ ಕೌಶಲ್ಯಕ್ಕೆ ಧಾರ್ಮಿಕ ಶ್ರದ್ಧೆಗೆ, ವೈಜ್ಞಾನಿಕ-ಭೌಗೋಳಿಕ ಜ್ಞಾನಕ್ಕೆ, ಆಧ್ಯಾತ್ಮದ ಅನುಭೂತಿಗೆ ಇಂದಿಗೂ ಸಾಕ್ಷಿಯಾಗಿದೆ.

  ಶಿವರಾತ್ರಿಯಂದು ಭಕ್ತಿಯಿಂದ ದರ್ಶನ, ಪೂಜೆ ಕೈಗೊಳ್ಳುವ ಭಕ್ತರಿಗೆ ವಿಶೇಷ ಅನುಗ್ರಹ ನೀಡುವನೆಂದು ಸ್ವತಃ ಶಿವನೇ ಪಾರ್ವತಿಗೆ ಹೇಳಿದನೆಂದು ಸ್ಕಂದ ಪುರಾಣದಲ್ಲಿದೆ.
  ಪಂಚಾಮೃತ, ಶಿವ ಪಂಚಾಕ್ಷರಿ, ಪಂಚ ಭೂತಗಳನ್ನು, ಪಂಚಮುಖಿ ಶಿವನ 5 ಮುಖಗಳನ್ನು, ಪಂಚಭಾವಗಳನ್ನು ಪ್ರತಿನಿಧಿಸುವ ಕ್ಷೇತ್ರಗಳು ಶಿರಸಿಯ ಸಮೀಪದಲ್ಲೇ ಇದ್ದು, ಪಂಚ ತತ್ವಗಳನ್ನು ಸಾರುವ ಲಿಂಗಗಳಾಗಿದೆ.

  ಹಾವೇರಿಯ ಸಿದ್ದೇಶ್ವರ ಪೃಥ್ವಿ, ಹಾನಗಲ್‍ನ ತಾರಕೇಶ್ವರ ಜಲ/ನೀರು, ತಿಳುವಳ್ಳಿಯ ಶಾಂತೇಶ್ವರ ವಾಯು, ಕೋಟಿಪುರ (ಆನವಟ್ಟಿ)ಯ ಕೈಟಭೇಶ್ವರ ಅಗ್ನಿ, ಬನವಾಸಿಯ ಮಧುಕೇಶ್ವರ ಆಕಾಶ ತತ್ವಗಳನ್ನು ಸಾರುವ ಲಿಂಗಗಳಾಗಿವೆ. ಪೃಥ್ವಿಯಿಂದ ಪ್ರಾರಂಭಿಸಿ ಆಕಾಶದವರೆಗೆ ಇದೇ ಕ್ರಮದಲ್ಲಿಯೇ ಪಂಚಲಿಂಗ ಪರಿಕ್ರಮ ಮಾಡುವುದು ಉತ್ತಮವೆಂದು ತಿಳಿದವರ ಅಭಿಪ್ರಾಯ.

  1) ಹಾವೇರಿ : ಸಿದ್ದೇಶ್ವರ : ಪೃಥ್ವಿತತ್ವ: ಹಾವೇರಿ ಮದ್ಯಭಾಗದಲ್ಲಿದ್ದು ರಸ್ತೆ ಮಟ್ಟದಿಂದ ಸುಮಾರು 8 ಅಡಿ ತಗ್ಗಿನಲ್ಲಿದೆ. ಕಲ್ಯಾಣ ಚಾಲುಕ್ಯರಿಂದ ಸುಮಾರು 1200 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇಲ್ಲಿ ಭಗ್ನವಾದ ಉಗ್ರ ನರಸಿಂಹನ ಮೂರ್ತಿ ಇದೆ. ದೇವಾಲಯದ ಹಿಂಭಾಗದಲ್ಲಿ 24 ಪ್ರಾಚೀನ ಶಾಸನಗಳಿವೆ. ಗೋಪುರದ ಶಿಖರ ಗಣಿತದ ಅನುಪಾತದಲ್ಲಿದೆ. ಇಲ್ಲಿ ಪೂಜೆಗೆ ಬಿಲ್ವಪತ್ರೆ ಒಳ್ಳೆಯದು.
  2) ಹಾನಗಲ್ : ತಾರಕೇಶ್ವರ : ಜಲತತ್ವ: ಹಾವೇರಿಯಿಂದ ಪಶ್ಚಿಮಕ್ಕೆ 38ಕಿ.ಮೀ. ದೂರದಲ್ಲಿ ಧರ್ಮಾ ನದಿಯ ತೀರದಲ್ಲಿದೆ. ತಾರಕ ಎಂದರೆ ದಾಟಿಸುವುದು (ಭವಬಂಧನಗಳಿಂದ), ಗೋಳಾಕಾರದ ಮೇಲ್ಚಾವಣಿಯಲ್ಲಿ ಅಷ್ಟದಿಕ್ಪಾಲಕರ ವಿಗ್ರಹಗಳು 45 ಡಿಗ್ರಿ ಪತ್ನಿಯರು ಮತ್ತು ವಾಹನಗಳ ಜೊತೆಗೆ ಇರುವುದು ವಿಶೇಷ. ಈ ಶಿವನಿಗೆ ನೀರು ಎರೆದರೆ ಒಳ್ಳೆಯದು.

  300x250 AD

  3) ತಿಳುವಳ್ಳಿ : ಶಾಂತೇಶ್ವರ : ವಾಯುತತ್ವ: ಹಾನಗಲ್‍ನಿಂದ ದಕ್ಷಿಣಕ್ಕೆ 24 ಕಿ.ಮೀ. ದೂರದಲ್ಲಿದ್ದು, ಮರಾಠ ಪೇಶ್ವ ರಘುನಾಥರಾವ್ ಕಾಲದಲ್ಲಿ ನಿರ್ಮಿಸಲಾಗಿದೆ. ಜಾಲಂದ್ರಗಳ ಕೆತ್ತನೆ ಇಲ್ಲಿನ ವಿಶೇಷ. ವಾಯು ಈಶ್ವರನಿಗೆ ಬೀಸಿ ಅಭಿಷೇಕ ಮಾಡುವುದು ಇದರ ಉದ್ದೇಶ. ಇಂದಿಗೂ ಚಿತ್ಪಾವನ ಬ್ರಾಹ್ಮಣರ ವಿಭಿನ್ನ ಪೂಜೆ ಇಲ್ಲಿ ನಡೆಯುತ್ತದೆ. ಶಾಂತವಾದ ಪರಿಸರವಿದ್ದು, ತಣ್ಣನೆಯ ಗಾಳಿಯ ತಂಪಾದ ಅನುಭವ ಅವರ್ಚನೀಯ. ಈ ದೇವನಿಗೆ ಹಾಲು ಅಭಿಷೇಕ ಮಾಡಬೇಕು.

  4) ಕೋಟಿಪುರ : ಕೈಟಭೇಶ್ವರ : ಅಗ್ನಿತತ್ವ: ತಿಳವಳ್ಳಿಯ ಶಾಂತೇಶ್ವರ ದೇವಾಲಯದಿಂದ 14ಕಿ.ಮೀ. ಉತ್ತರಕ್ಕೆ ಬಂದರೆ ಕೋಟಿಪುರ, ಶಿವಮೊಗ್ಗ ಜಿಲ್ಲೆ, ಸೊರಬ ತಾಲೂಕಿನ ಆನವಟ್ಟಿಯ ಸಮೀಪ ಈ ದೇವಾಲಯವಿದೆ. ಊರಿನ ಹೊರಗೆ ಬಯಲಿನಲ್ಲಿ ಪ್ರಶಾಂತ ವಾತಾವರಣದಲ್ಲಿರುವ ಈ ದೇವಾಲಯದಲ್ಲಿ ಮಹಾಯೋಗಮೂರ್ತಿಯ ರೂಪದಲ್ಲಿ ದೊಡ್ಡ ಶಿವಲಿಂಗವಿದೆ. ಇಲ್ಲಿ ಭಸ್ಮ ಉಪಯೋಗಿಸಿ.

  5) ಬನವಾಸಿ : ಮಧುಕೇಶ್ವರ : ಆಕಾಶತತ್ವ: ಪಶ್ಚಿಮಕ್ಕೆ 23ಕಿ.ಮೀ. ದೂರದಲ್ಲಿ ಬನವಾಸಿ ಇದೆ. ಇಲ್ಲಿನ ಮಧುಕೇಶ್ವರ ದೇವಸ್ಥಾನವು ಎತ್ತರದ ಜಾಗದಲ್ಲಿದ್ದು, ತ್ರೈಲೋಕ್ಯ ಮಂಟಪವಿರುವುದು ವಿಶೇಷ. ಆಕಾಶದ ಮೆಟ್ಟಿಲಿನ ಮೇಲೆ ಶಿವಪಾರ್ವತಿಯರನ್ನು ಮೆರವಣಿಗೆ ಮಾಡುವುದರ ಸಂಕೇತ ತ್ರೈಲೋಕ್ಯ ಮಂಟಪದಲ್ಲಿ ಅರಳಿಸಿದ್ದಾರೆ. ಇಲ್ಲಿ ಶಿವ ಭೋಗಮೂರ್ತಿ, ತ್ರಿಕಾಲ ಪೂಜೆ ನಡೆಯುತ್ತದೆ. ಶಿವರಾತ್ರಿಯ ದಿನ ಎಲ್ಲರಿಗೂ ಇಲ್ಲಿಯ ಜೇನುತುಪ್ಪದ ಬಣ್ಣದ ಶಿವಲಿಂಗಕ್ಕೆ ಅಭಿಷೇಕ ಮಾಡಲು ಅವಕಾಶವಿದೆ. ಇಲ್ಲಿ ಎಳನೀರಿನ ಅಭಿಷೇಕ ಮಾಡಿ.

  ಶಿರಸಿಯ ಸಮೀಪವೇ ಕೇವಲ 196ಕಿ.ಮೀ. ಪ್ರಯಾಣದೊಂದಿಗೆ ಒಂದೇ ದಿನದಲ್ಲಿ ಸಾಧ್ಯವಿರುವ “ಪಂಚಲಿಂಗಗಳ ದರ್ಶನದ ಅಪರೂಪದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಶಿವನಿಗೆ ಪ್ರಿಯವಾದ ಶಿವರಾತ್ರಿಯಂದೇ ಶಿವನ ಕೃಪೆಗೆ ಪಾತ್ರರಾಗಿ.

  ಲೇಖನ: ಡಾ.ಶಿವರಾಮ ಕೆ.ವಿ ಶಿರಸಿ

  ಮಾಹಿತಿ ಸಂಗ್ರಹ: ನಾಗಭೂಷಣ್, ದಾವಣಗೆರೆ

  Share This
  300x250 AD
  300x250 AD
  300x250 AD
  Leaderboard Ad
  Back to top