ಶಿರಸಿ: ಇಲ್ಲಿಯ ದಿ ಚೇತನಾ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಕೋ-ಒಪ್ ಸೊಸೈಟಿಯು 2020-21 ನೇ ಸಾಲಿನಲ್ಲಿ 4 ಲಕ್ಷ ರೂ. ಗಳ ನಿವ್ವಳ ಲಾಭಗಳಿಸಿದ್ದಲ್ಲದೇ, ಸದಸ್ಯರಿಗೆ ಇದೇ ಮೊದಲ ಬಾರಿಗೆ ದಾಖಲೆಯ ಶೇ.25ರಷ್ಟು ಡಿವಿಡೆಂಡ್ ಹಂಚಲು ನಿರ್ಧರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ.ಎಮ್ ಹೆಗಡೆ ಹುಳಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಕಾರಿ ರಂಗದ ಆಶೋತ್ತರಗಳನ್ನು ಹೊಂದಿ 1988ರಲ್ಲಿ ಸ್ಥಾಪನೆಗೊಂಡ ಚೇತನಾ ಸಹಕಾರಿ ಮುದ್ರಣಾಲಯವು ಆರಂಭದಲ್ಲಿ ತೀರ ಕಷ್ಟದ ದಿನಗಳನ್ನು ಕಳೆದಿದೆ. ಲಕ್ಷಕ್ಕೂ ಅಧಿಕ ಮೊತ್ತದ ಸಾಲವನ್ನು ಹೊಂದಿದ್ದಲ್ಲದೇ, ನಷ್ಟದ ಹಾದಿಯಲ್ಲಿಯೂ ಸಂಸ್ಥೆ ಸಾಗಿತ್ತು. ಕಾಲಕ್ರಮೇಣ ತನ್ನ ಕಾರ್ಯಕ್ಷಮತೆ ಹಾಗೂ ಬದ್ಧತೆಯೊಂದಿಗೆ ಮುದ್ರಣ ಕಾರ್ಯದಲ್ಲಿ ಜನಸಾಮಾನ್ಯರ ನಂಬಿಕೆಗೆ ಪಾತ್ರವಾದ ಸಂಸ್ಥೆಯು 1996 ರಿಂದ ಸತತ ಲಾಭದಲ್ಲಿ ಮುಂದುವರಿಯುತ್ತಲಿದೆ.
ಕೇವಲ ಶಿರಸಿ, ಸಿದ್ದಾಪುರ, ಯಲ್ಲಾಪುರ ಮಾತ್ರವಲ್ಲದೇ ಜಿಲ್ಲೆಯ ವಿವಿಧೆಡೆಯಿಂದ ಪ್ರಾಥಮಿಕ ಪತ್ತಿನ ಸಹಕಾರಿ ಸಂಸ್ಥೆಗಳು, ಸೌಹಾರ್ಧ ಬ್ಯಾಂಕ್‍ಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ಸಹಕಾರಿ ಅಭಿಮಾನಿಗಳು ಹೆಚ್ಚಾಗಿ ಮುದ್ರಣ ಕಾರ್ಯವನ್ನು ನೀಡುತ್ತಿದ್ದಾರೆ. ಸಹಕಾರಿ ಕಾಯ್ದೆ ಕಾನೂನಿಡಿಯಲ್ಲಿ ಸಹಕಾರಿ ಮನೋಭಾವನೆಯಿಂದ ಕಡಿಮೆ ವೆಚ್ಚದೊಂದಿಗೆ, ಸ್ಪರ್ಧಾತ್ಮಕ ದರದಲ್ಲಿ ಮುದ್ರಣ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡುತ್ತಿರುವ ಬದ್ಧತೆಯಿಂದಲೇ ಚೇತನಾ ಸಹಕಾರಿ ಮುದ್ರಣಾಲಯ ಜನಸಾಮಾನ್ಯರಿಗೆ ತೀರ ಹತ್ತಿರವಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಸಹಕಾರ ಇಲಾಖೆಯಡಿಯಲ್ಲಿ ನೋಂದಣಿಗೊಂಡ 25 ಮುದ್ರಣಾಲಯಗಳ ಪೈಕಿ 14 ಸಮಾಪನಗೊಂಡಿದೆ. ಇನ್ನುಳಿದ ಬೆರಳೆಣಿಕೆಯ ಸಹಕಾರಿ ಮುದ್ರಣಾಲಯಗಳ ಪೈಕಿ ರಾಜ್ಯಕ್ಕೆ ಮಾದರಿಯೆಂಬಂತೆ 2020-21 ನೇ ವರದಿ ಸಾಲಿನಲ್ಲಿ ಒಟ್ಟೂ 35.45 ಲಕ್ಷ ರು.ಗಳ ಮುದ್ರಣ ಕಾರ್ಯಗಳನ್ನು ನಿರ್ವಹಿಸಿ, ಒಟ್ಟೂ 108.93 ಲಕ್ಷ ಒಟ್ಟೂ ನಿಧಿಗಳನ್ನು ಚೇತನಾ ಸಹಕಾರಿ ಮುದ್ರಣಾಲಯ ಹೊಂದಿದೆ. 2.27 ಲಕ್ಷ ರೂ.ಗಳ ಶೇರು ಬಂಡವಾಳ, 50.69 ಲಕ್ಷ ಗುಂತಾವಣೆಯನ್ನು ಹೊಂದುವ ಮೂಲಕ ಲೆಕ್ಕ ಪರಿಶೋಧನೆಯಲ್ಲಿ `ಅ’ ವರ್ಗದಲ್ಲಿ ಪ್ರಗತಿಯತ್ತ ಸಾಗುತ್ತಿರುವ ಸಂಸ್ಥೆಗೆ ಸಹಕಾರಿ ಅಭಿಮಾನಿಗಳು ಇನ್ನೂ ಹೆಚ್ಚಿನ ಚೈತನ್ಯ ತುಂಬುವಂತೆ ಮನವಿ ಮಾಡಿದ್ದಾರೆ.