ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಎನ್‍ಇಪಿ 2020 ಜಾರಿಯಾಗುತ್ತಿದ್ದು, ಈ ನೀತಿಯಡಿ ಇಂದಿನಿಂದಲೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಗಳೂ ನಡೆಯಲಿದೆ.
ನೂತನ ಶಿಕ್ಷಣ ನೀತಿಯನ್ನು ಅಳವಡಿಸಿದ ಮೊದಲ ರಾಜ್ಯವೆಂಬ ಹಿರಿಮೆಗೆ ಕರ್ನಾಟಕ ಸಾಕ್ಷಿಯಾಗಲಿದೆ. ಇಂದಿನಿಂದಲೇ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತಹ ಎಲ್ಲಾ ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆರಂಭವಾಗಲಿದೆ. ಅಂತಹ ಸಂಸ್ಥೆಗಳಲ್ಲಿ ದಾಖಲಾದ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲೇ ತಮ್ಮ ಆಯ್ಕೆಯ ಪಠ್ಯವನ್ನು ವ್ಯಾಸಾಂಗ ಮಾಡಲಿದ್ದಾರೆ. ಅಕ್ಟೋಬರ್ 1 ರಿಂದ ತರಗತಿಗಳು ಆರಂಭವಾಗಲಿವೆ ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಏಕೀಕೃತ ವಿಶ್ವವಿದ್ಯಾಲಯ ವ್ಯವಸ್ಥೆ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಲೋಕಾರ್ಪಣೆ ಆಗುತ್ತಿದ್ದು, ಸರ್ಕಾರಿ ಕಾಲೇಜುಗಳು ಮಾತ್ರವಲ್ಲದೆ ಅನುದಾನಿತ, ಖಾಸಗಿ ವ್ಯವಸ್ಥೆಗಳಡಿಯಲ್ಲಿಯೂ ಈ ವ್ಯವಸ್ಥೆ ಮೂಲಕ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳುವಂತೆ ಸಚಿವರು ಸೂಚಿಸಿದ್ದಾರೆ. ಆನ್ಲೈನ್ ಮೂಲಕವೇ ದಾಖಲಾತಿ ಕಾರ್ಯಗಳು ನಡೆಯಲಿವೆ. ವೆಬ್ ಮೂಲಕವೇ ಎಲ್ಲಾ ಮಾಹಿತಿಗಳನ್ನು ಸಹ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ. ಯುಜಿಸಿ ಮಾರ್ಗಸೂಚಿ ಅನ್ವಯವೇ ತರಗತಿಗಳ ನಡೆಯಲಿವೆ. ಎಲ್ಲವನ್ನೂ ತಂತ್ರಜ್ಞಾನದ ಮೂಲಕವೇ ನಡೆಸಲಾಗುತ್ತಿದ್ದು, ವಿಳಂಬವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13