ವಲ್ಮೀಕಪ್ರಭವೇಣ ರಾಮನೃಪತಿರ್ವ್ಯಾಸೇನ ಧರ್ಮಾತ್ಮಜೋ
ವ್ಯಾಖ್ಯಾತಃ ಕಿಲ ಕಾಲಿದಾಸಕವಿನಾ ಶ್ರೀವಿಕ್ರಮಾಂಕೋ ನೃಪಃ |
ಭೋಜಶ್ಚಿತ್ತಪಬಿಲ್ಹಣಪ್ರಭೃತಿಭಿಃ ಕರ್ಣೋಪಿ ವಿದ್ಯಾಪತೇ
ಖ್ಯಾತಿಂ ಯಾಂತಿ ನರೇಶ್ವರಾಃ ಕವಿವರೈಃ ಸ್ಫಾರೈರ್ನ ಭೇರೀರವೈಃ |
ಹುತ್ತದಿಂದ ಹುಟ್ಟಿದ ವಾಲ್ಮೀಕಿಯೆಂಬೋ ಕವಿತಾಪಸನಿಂದಾಗಿ ರಾಮಾಯಣದ ಮೂಲಕ
ರಾಜಾರಾಮನೂ, ವ್ಯಾಸನೆಂಬೋ ಕವಿತಾಪಸನಿಂದಾಗಿ ಮಹಾಭಾರತದ ಮೂಲಕ ಧರ್ಮರಾಯನೂ, ಕಾಲಿದಾಸನೆಂಬೋ ಮಹಾಕವಿಯಿಂದಾಗಿ ವಿಕ್ರಮಾಂಕ ನೃಪತಿಯೂ, ಭೋಜ, ಚಿತ್ತಪ, ಬಿಲ್ಹಣ ಇತ್ಯಾದಿ ಸುಕವಿಗಳಿಂದಾಗಿ ಕರ್ಣನಂಥಾ ಕರ್ಣನೂ ಜನಮಾನಸವನ್ನು ತಲುಪುವ ಪಾತ್ರವಾಗುತ್ತಾರೆ. ಅಂದರೆ ಲೋಕದಲ್ಲಿ ರಾಜರೆಲ್ಲ ಖ್ಯಾತರಾಗಿದ್ದು, ನೆನಪಿನಲ್ಲಿ ಉಳಿದಿದ್ದು ಮತ್ತು ಜನಕ್ಕೆಲ್ಲ ತಿಳಿದಿದ್ದು ಶ್ರೇಷ್ಠರಾದ ಕವಿಗಳಿಂದ ಮತ್ತವರ ಕಾವ್ಯಗಳಿಂದಲೇ ಹೊರತು ಭಯಂಕರವಾದ ಭೇರೀಶಬ್ದಗಳಿಂದಾಗಿ
ಅಲ್ಲ. ಗುಣಗ್ರಾಹಿಯಾದವರಿಂದ ಆದರಿಸಲ್ಪಟ್ಟವನೇ ಜನಮಾನಸದಲ್ಲಿ ಉಳಿಯುತ್ತಾನೆ, ತನ್ನ ಗುಣಗಳನ್ನು ತಾನೇ ದೊಡ್ಡದಾಗಿ ಡಂಗುರ ಹೊಡೆಸಿಕೊಂಡು ತಿರುಗುವುದರಿಂದ ಯಾರೂ ದೊಡ್ಡವರಾಗುವುದಿಲ್ಲ. ರಾಜಕಾರಣಿಗಳ ಜನ್ಮದಿನಕ್ಕೆ, ಗಣೇಶಹಬ್ಬಕ್ಕೆ ಅಂತೆಲ್ಲ ಶುಭಾಶಯದ ಪಟಪತ್ರಗಳನ್ನು ಊರತುಂಬಾ ಅಂಟಿಸಿ ತಮ್ಮ ದೊಡ್ಡ ದೊಡ್ಡ ಚಿತ್ರಗಳನ್ನು ಅಂಟಿಸಿಕೊಳ್ಳುವ ಜನರನ್ನು ಕಂಡಾಗ, ಶಬ್ದ ಮಾಡುವ ಭೇರಿಯ ನೆನಪಾಗುತ್ತದೆ.
ಶ್ರೀ ನವೀನ ಗಂಗೋತ್ರಿ
ಸುವಿಚಾರ
