ಯಲ್ಲಾಪುರ: ಹಿರಿಯರ ಸಾಧನೆಯ ದಾಖಲೀಕರಣ ಯುವ ಪೀಳಿಗೆಗೆ ಮಾರ್ಗದರ್ಶನ ಹಾಗೂ ಸಾಧನೆಗೆ ಪ್ರೇರಣೆ ನೀಡುತ್ತದೆ ಎಂದು ಹಿರಿಯ ರಂಗಕರ್ಮಿ ರಾಮಕೃಷ್ಣ ಭಟ್ಟ ಧುಂಡಿ ಹೇಳಿದರು.
ಅವರು ತಾಲೂಕಿನ ಮಂಚಿಕೇರಿಯಲ್ಲಿ ನಿವೃತ್ತ ಶಿಕ್ಷಕ, ಅಂಚೆಚೀಟಿ ಸಂಗ್ರಾಹಕ ಹಾಗೂ ಹಿರಿಯ ಪತ್ರಕರ್ತ ಪದ್ಮಾಕರ ಫಾಯ್ದೆ ಅವರ ಕುರಿತು ಹೊರತಂದ ‘ಜನರ ಮನದಲ್ಲಿ ಫಾಯ್ದೆ ಮಾಸ್ತರ್’ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಫಾಯ್ದೆ ಅವರ ಕುರಿತು ಮಾತನಾಡಿ, ಬಹುಮುಖ ವ್ಯಕ್ತಿತ್ವದ ಫಾಯ್ದೆ ಅವರು ಶಿಕ್ಷಣ ಕ್ಷೇತ್ರ, ಅಂಚೆಚೀಟಿ, ಕ್ಯಾಲೆಂಡರ್ ಸಂಗ್ರಹ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಅಪಾರ. ಅವರಿಂದ ಸಮಾಜಕ್ಕೆ ವಿವಿಧ ನೆಲೆಯಲ್ಲಿ ‘ಫಾಯ್ದೆ’ಯಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ಹಾಗೂ ಫಾಯ್ದೆ ಅವರೊಂದಿಗಿನ ಒಡನಾಟದ ಕುರಿತು ಪ್ರಮುಖರಾದ ಸತೀಶ ಯಲ್ಲಾಪುರ, ಉಲ್ಲಾಸ ಶಾನಭಾಗ, ಸಣ್ಣಪ್ಪ ಭಾಗ್ವತ, ವಿ.ಜಿ.ಭಟ್ಟ, ನಾಗರಾಜ ಮದ್ಗುಣಿ ಇತರರು ಮಾತನಾಡಿದರು. ಪದ್ಮಾಕರ ಫಾಯ್ದೆ, ಜಯಶ್ರೀ ಫಾಯ್ದೆ, ಡಾ.ಸುಚೇತಾ ಮದ್ಗುಣಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀಧರ ಅಣಲಗಾರ ಇತರರಿದ್ದರು. ಡಾ.ಪ್ರಸನ್ನ ಫಾಯ್ದೆ, ಶಿಕ್ಷಕರಾದ ಪ್ರವೀಣ ಫಾಯ್ದೆ, ನಾರಾಯಣ ಶೇರುಗಾರ, ಪತ್ರಕರ್ತ ನರಸಿಂಹ ಸಾತೊಡ್ಡಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಲಾಯಿತು.