ಯಲ್ಲಾಪುರ: ಮನೆ ಮತ್ತು ದೇವಸ್ಥಾನಗಳಲ್ಲಿ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿದೆ. ಸಾರ್ವಜನಿಕ ಗಜಾನನೋತ್ಸವ ಆಚರಣೆಗೆ ಸರ್ಕಾರ ಅನುಮತಿ ನೀಡಿಲ್ಲ ಎಂದು ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಹೇಳಿದರು.
ಅವರು ಪಟ್ಟಣದ ಅಡಕೆ ಭವನದಲ್ಲಿ ಗಜಾನನೋತ್ಸವ ಸಮಿತಿ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಸ್ಥಾನಗಳಲ್ಲಿ ತಾಲೂಕು ಆಡಳಿತದ ಅನುಮತಿ ಪಡೆದು ಗಜಾನನೋತ್ಸವ ಆಚರಿಸಬಹುದು. ಕರೊನಾ ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯ ಎಂದರು.
ದೇವಿ ಮೈದಾನ ಗಜಾನನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ಮಾತನಾಡಿ, ಕಳೆದ ವರ್ಷ ಶಾಶ್ವತ ಶೆಡ್, ಪೆಂಡಾಲ್ ಹೊಂದಿದ ಸಮಿತಿಗಳಿಗೆ ಸಾರ್ವಜನಿಕವಾಗಿ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ನೀಡಲಾಗಿತ್ತು. ಈ ಬಾರಿಯೂ ಅವಕಾಶ ನೀಡುವಂತೆ ವಿನಂತಿಸಿದರು. ಇದಕ್ಕೆ ತಹಸೀಲ್ದಾರ ಪ್ರತಿಕ್ರಿಯಿಸಿ, ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕು. ಇಂತಹ ತೀರ್ಮಾನಗಳು ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿದ್ದು, ಸರ್ಕಾರ ಮಾರ್ಗಸೂಚಿ ಬದಲಾವಣೆಯಿಸಿ ಅನುಮತಿ ನೀಡಿದರೆ ಮಾತ್ರ ಅವಕಾಶ ನೀಡಲಾಗುವುದು ಎಂದರು.
ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಪಿಎಸೈ ಮಂಜುನಾಥ ಗೌಡರ್, ಪ.ಪಂ ಮುಖ್ಯಾಧಿಕಾರಿ ಅರುಣ ನಾಯ್ಕ ಇದ್ದರು. ಪೆÇಲೀಸ್ ಇಲಾಖೆಯ ನಾಗಪ್ಪ ಲಮಾಣಿ ನಿರ್ವಹಿಸಿದರು.
ಸಚಿವರಿಗೆ ಮನವಿ: ಸಭೆಯ ನಂತರ ಸಾರ್ವಜನಿಕ ಗಜಾನನೋತ್ಸವಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ಗಜಾನನೋತ್ಸವ ಸಮಿತಿಗಳ ಪ್ರಮುಖರು ಸಚಿವ ಶಿವರಾಮ ಹೆಬ್ಬಾರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಸರ್ಕಾರದ ಗಮನಕ್ಕೆ ಈ ವಿಷಯವನ್ನು ತಂದು ಮುಂದಿನ ವಾರ ನಿರ್ಣಯ ಕೈಗೊಳ್ಳುವ ಭರವಸೆ ನೀಡಿದರು.