ಶಿರಸಿ: ಬ್ಯಾಂಕುಗಳ ಸೇವೆ ಸಮಾಜದ ಪ್ರತಿಯೊಬ್ಬರಿಗೂ ತಲುಪಲಿ. ಸಮಾಜದ ಕಟ್ಟಕಡೆಯ ವ್ಯಕ್ತಿ ಬ್ಯಾಂಕುಗಳ ಪ್ರಯೋಜನ ಪಡೆಯುವಂತಾಗಲಿ. ಕೇವಲ ಸಾರಿಗೆ, ಗೃಹ, ಕೈಗಾರಿಕೆಗಳಿಗೆ ಮಾತ್ರವಲ್ಲದೇ ಕೃಷಿ ರಂಗಕ್ಕೂ ಬ್ಯಾಂಕುಗಳ ಲಾಭ ವಿಸ್ತರಿಸಲಿ ಎಂದು ಎಂ.ಇ.ಎಸ್. ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಹೇಳಿದರು.
ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿ ಈ ಜಿಲ್ಲೆಯ ಜನ ಬುದ್ಧಿಜೀವಿಗಳು, ಆರ್ಥಿಕ ಸಂಸ್ಥೆಗಳಲ್ಲಿ ಶಿಸ್ತು, ಬದ್ಧತೆ ನಿರ್ಮಾಣ ಮಾಡುವ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಹೇಳಿದರು.
ಉದ್ಯಮಿ ಹಾಗೂ ಕಾಲೇಜು ಸಮಿತಿಯ ಚೇರಮನ್ ವರೀಂದ್ರ ಕಾಮತ್ ಮಾತನಾಡಿ ದೇಶಾದ್ಯಂತ ಹರಡಿರುವ ಕರೋನಾ ಸೋಂಕಿನ ನಡುವೆಯೂ ಆಯ್.ಸಿ.ಆಯ್.ಸಿ.ಆಯ್ ಬ್ಯಾಂಕನವರು ಉದ್ಯೋಗ ನೇಮಕಾತಿ ಮಾಡುತ್ತಿರುವುದು ಪ್ರಶಂಸಾರ್ಹವೆಂದು ಹೇಳಿದರು.
ಬ್ಯಾಂಕನ ಹುಬ್ಬಳ್ಳಿ ವಿಭಾಗದ ಮುಖ್ಯಸ್ಥ ಗೋಪಾಲ ಗಡಗಿ ಸಾಂದರ್ಭಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ. ಟಿ.ಎಸ್.ಹಳೆಮನೆ ಸ್ವಾಗತಿಸಿದರು. ಪ್ರೊ. ವಿನಯ ಹೆಗಡೆ ವಂದಿಸಿದರು. ಈ ಉದ್ಯೋಗ ಮೇಳದಲ್ಲಿ ಹತ್ತು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯ ಶಿರಸಿ ಹಾಗೂ ಆಯ್.ಸಿ.ಆಯ್.ಸಿ.ಆಯ್ ಬ್ಯಾಂಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.