ಭಟ್ಕಳ: ಉತ್ತರ ಕನ್ನಡ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ರವರ ಜಯಂತಿ ಉತ್ಸವವನ್ನು, ಭಟ್ಕಳ ತಾಲೂಕಿನ ಅಳ್ವೆಕೊಡಿ ಪ್ರಾಥಮಿಕ ಶಾಲೆಯ ಆವರಣದಲ್ಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಣೆ ಮಾಡಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ಸಿನ ಹಿರಿಯ ಮುಖಂಡ ರಾಮ ಮೊಗೇರ್ ಮಾತನಾಡಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸುತ್ತಿರುವುದು ಅರ್ಥಪೂರ್ಣವಾಗಿದೆ. ನಮ್ಮ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸುರವರ ಕೊಡುಗೆಯನ್ನು ನೆನಪಿಸುತ್ತಾ ರಾಜೀವ್ ಗಾಂಧಿಯವರು ದೇಶಕಂಡ ಅಪ್ರತಿಮ ಪ್ರಧಾನಿಗಳಲ್ಲಿ ಒಬ್ಬರಾಗಿದ್ದು ಐಟಿ ಬಿಟಿ ಯಂತಹ ಕ್ರಾಂತಿಕಾರಿ ಯೋಜನೆಯನ್ನು ನಮ್ಮ ದೇಶದಲ್ಲಿ ಹುಟ್ಟುಹಾಕುದರ ಜೊತೆಗೆ ನವೋದಯದಂತಹ ಶಾಲೆಗಳನ್ನು ಜಿಲ್ಲೆಗೆ ಒಂದರಂತೆ ತೆರೆದು, ದೇಶದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದ ಮಾಹಾನುಭಾವರಾಗಿದ್ದಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ್ ಅರಸುರವರು ಹಿಂದುಳಿದ ವರ್ಗದ ಧ್ವನಿಯಾಗಿದ್ದರು ಹಾಗೂ ಭೂ ಸುಧಾರಣೆಯಂತ ಕಾನೂನನ್ನು ಕರ್ನಾಟಕ ರಾಜ್ಯದಲ್ಲಿ ತಂದು ಪ್ರತಿಯೊಬ್ಬ ಬಡವರು ಕೊಡತಕ್ಕಂತ ಗೇಣಿಯನ್ನು ಬಂದ್ ಮಾಡಿಸಿ, ಬಡವರಿಗೆ ಭೂ ಒಡೆತನದ ಹಕ್ಕನ್ನು ಕೊಡಿಸಿದ ಮಾಹಾನುಭಾವರಾಗಿದ್ದಾರೆ ಎಂದು ಕೊಂಡಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ ಜೆ ಡಿ ನಾಯ್ಕ ಮಾತನಾಡಿ ದಿ.ರಾಜೀವ ಗಾಂಧಿ 18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ತಂದು ಕೊಟ್ಟು, ಬಡತನ ನಿರ್ಮೂಲನೆಯಂತ ಕಾರ್ಯಕ್ರಮಕ್ಕೆ ತುಂಬಾ ಶ್ರಮಿಸಿದ್ದರು. ದೇವರಾಜ್ ಅರಸುರವರು ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಲ್ಲರನ್ನು ಒಗ್ಗೂಡಿಸಿ ರಾಜಕೀಯದಲ್ಲಿ ಒಂದು ಹೊಸ ಪ್ರಯೋಗವನ್ನು ಮಾಡಿ ತೋರಿಸಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿ ದಿವಂಗತ ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇಡೀ ದೇಶದಲ್ಲಿ ತಂದು ಗ್ರಾಮಗಳಲ್ಲಿ ಪ್ರತಿನಿಧಿಗಳಿಗೂ ಅಧಿಕಾರ ಕೊಡುವಂತ ಕೆಲಸ ಮಾಡಿದ್ದಾರೆ. ಯುವ ಶಕ್ತಿಗೆ ನಮ್ಮ ದೇಶದಲ್ಲಿ ಮತದಾನದ ಹಕ್ಕನ್ನು ಕೊಡಿಸುವಲ್ಲಿ ರಾಜೀವ್ ಗಾಂಧಿಯವರ ಕೊಡುಗೆ ಅಪಾರವಾದದ್ದು. ಅವರು ದೇಶದ ಹಿತಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹ ಮಹಾತ್ಮರು ಕಟ್ಟಿಸಿದ ಪಕ್ಷದಲ್ಲಿ ನಾವಿರುವುದು, ಇದು ನಮ್ಮ ಸೌಭಾಗ್ಯ ಎಂದು ಹೇಳಿದರು. ಇವತ್ತು ಸಾಂಕೇತಿಕವಾಗಿ ಅಳ್ವೆಕೊಡಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಗಳನ್ನು ವಿತರಣೆ ಮಾಡಿದ್ದೇವೆ. ಇನ್ನು ಬರುವ ದಿನಗಳಲ್ಲಿ ತಾಲೂಕಿನ ಪ್ರತಿ ಶಾಲೆಗೂ ಯುವ ಕಾಂಗ್ರೆಸ್ ವತಿಯಿಂದ ನೋಟ್ ಬುಕ್ ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಕಾರ್ಯಕ್ರಮ ರುವಾರಿಗಳು ಹಾಗೂ ಜಿಲ್ಲಾ ಯುವ ಕಾಂಗ್ರೆಸ್ಸಿನ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ನಾಯ್ಕ ಅಳ್ವೆಕೊಡಿ, ಮಾಧವ್ ಮೊಗೇರ್, ರಮೇಶ್ ಮೊಗೇರ್, ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕಲಾ ನಾಯ್ಕ, ಸಂತೋಷ ನಾಯ್ಕ ಶಿರಸಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಜರ್, ಜಿಲ್ಲಾ ಕಾರ್ಯದರ್ಶಿ ಸೂರಜ್ ನಾಯ್ಕ, ಕೇಶವ ಮೊಗೇರ್, ಶಿವರಾಜ್ ಮೊಗೇರ್, ಕಿರಣ್ ಮೊಗೇರ್, ದೇವೇಂದ್ರ ನಾಯ್ಕ, ಮೋಹನ್ ನಾಯ್ಕ, ಮಾಧವ್ ನಾಯ್ಕ, ಶಂಕರ್ ನಾಯ್ಕ ಬಾಳೆಹಿತ್ಲು ಹಾಗೂ ಯುವ ಕಾಂಗ್ರೆಸ್ಸಿನ ಕಾರ್ಯಕರ್ತರು ಹಾಜರಿದ್ದರು. ಶಶಿಕಲಾ ನಾಯ್ಕ ಸ್ವಾಗತಿಸಿ ವಂದಿಸಿದರು.