ಶಿರಸಿ: ಕೊರೊನಾದಿಂದಾಗಿ ಅದೆಷ್ಟೋ ಕಲಾ ತಂಡಗಳು ಮೂಲೆ ಗುಂಪಾಗಿಬಿಟ್ಟಿದೆ. ಕೊರೊನಾ ತಡೆಗೆ ಸರ್ಕಾರದ ನೀತಿ-ನಿಯಮಗಳ ಮಧ್ಯೆ ಕಲಾ ಪ್ರದರ್ಶನ ಏರ್ಪಡಿಸಿ ಮನರಂಜನೆ ನೀಡುವುದು ಕಷ್ಟಸಾಧ್ಯವಾಗಿದೆ. ಈ ಮಧ್ಯೆ ಕಲಾ ತಂಡಗಳ ಖಾತೆಯಲ್ಲಿ ಅನುದಾನವಿದ್ದರೂ ಕೂಡಾ ಅದರ ಬಳಕೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾತ್ಕಾಲಿಕ ರಿಲೀಫ್ ನೀಡಲು ಚಿಂತನೆ ಮಾಡುತ್ತಿದೆ.
ಸ್ವತಃ ಇಲಾಖೆ ಕಳೆದ ಕಳೆದ ಮಾರ್ಚ ಕೊನೆಯಲ್ಲಿ ಅರ್ಜಿ ಹಾಕಿಕೊಂಡ ರಾಜ್ಯದ ಕಲಾ ಸಂಘಟನೆಗಳ ಖಾತೆಗೆ ಅನುದಾನ ಬಿಡುಗಡೆ ಮಾಡಿದೆ. ಅದರ ಬಳಕೆಗೆ ಕೋವಿಡ್ ನಿಯಮ, ಸುತ್ತೋಲೆ ಹಾಗೂ ಮೂರನೇ ಅಲೆಯ ಆತಂಕ ಅಡ್ಡಿಯಾಗಿತ್ತು. ಈಗ ಶೇ.50ರ ಅನುಮತಿಯಲ್ಲಿ ಸಿನೇಮಾ ಥಿಯೇಟರ್ ಅನುಮತಿ ಬೆನ್ನಲ್ಲೇ ಕೊಟ್ಟ ಅನುದಾನ ಬಳಕೆಗೆ ಆನ್‌ಲೈನ್‌ಗೆ ಅವಕಾಶವಾದರೂ ನೀಡಬೇಕು ಎಂಬುದು ಬೇಡಿಕೆ.
ಸಮಸ್ಯೆ: ಕಲೆಯನ್ನೇ ಆಧರಿಸಿ, ಬದಲಿ ಉದ್ಯೋಗವಿಲ್ಲದವರು ಜೀವನ ನಡೆಸುತ್ತಿರುವವರು ಕಾರ್ಯಕ್ರಮಗಳಿಲ್ಲದೇ ಆದಾಯವಿಲ್ಲ ಎಂದು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಅಲ್ಲೋ-ಇಲ್ಲೋ ಒಂದೆರಡು ಕಾಲಮಿತಿ ಪ್ರದರ್ಶನದಲ್ಲಿ ಆಟ ನಡೆಸಿದರೂ ಕೂಡಾ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಕಲಾವಿದರ ಹೊಟ್ಟೆ ತುಂಬುವುದಾದರೂ ಹೇಗೆ?
ಹೊಸ ಸಚಿವರು: ಕಳೆದ ಮಾರ್ಚ ಕೊನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯದ ಯಕ್ಷಗಾನ, ನಾಟಕ, ಸಂಗೀತ, ಚಿತ್ರಕಲೆ ಸೇರಿದಂತೆ ವಿವಿಧ ಕಲಾ ಪ್ರಕಾರದ ಸಂಘ ಸಂಸ್ಥೆಗಳಿಗೆ 50 ಸಾವಿರ ರೂಪಾಯಿಯಿಂದ 10 ಲಕ್ಷ ರೂ. ತನಕ ಸುಮಾರು 700ರಷ್ಟು ಕಲಾ ಸಂಘಟನೆಗಳಿಗೆ, ಕಲಾವಿದರುಗಳ ವಾದ್ಯ ವೇಷ ಭೂಷಣ ಪರಿಕರಗಳ ಖರೀದಿಗೆ 9 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ನೀಡಿದೆ. ಪ್ರತೀ ವರ್ಷ ಆಗಷ್ಟ ಕೊನೆಯ ಮಾಹೆಯಲ್ಲಿ ಪತ್ರಿಕೆಗಳಲ್ಲಿ ಅರ್ಜಿ ಆಹ್ವಾನಿಸಿ ಕಲಾ ಸಂಘಟನೆಗಳಿಂದ ಕ್ರಿಯಾಯೋಜನೆ ತರಿಸಿ ಕಾರ್ಯಕ್ರಮಕ್ಕೆ ಅನುದಾನ ನೀಡುತ್ತದೆ.
ಆ ವರ್ಷ ನೀಡುವ ಅನುದಾನ ಅದೇ ವರ್ಷ ಪೂರ್ಣ ಮಾಡಬೇಕು. ಇಲ್ಲವಾದಲ್ಲಿ ಮುಂದೆ ಅರ್ಜಿ ಕರೆದಾಗ ಅನುದಾನದ ನೆರವು ನೀಡಲು ಇಲಾಖೆಗೆ ಸಾಧ್ಯವಿಲ್ಲ. ಸಂಸ್ಥೆಗಳ ಅಡಿಟ್ ಜೊತೆಗೆ ಬಳಕೆ ಪ್ರಮಾಣ ಪತ್ರವನ್ನೂ ನೀಡಬೇಕು. ಕಲಾವಿದರ ಗೌರವಧನ, ಮೈಕ್, ಲೈಟ್‌ಗೆ ಈ ಹಣ ಬಳಸಿಕೊಂಡು ಉಳಿದ ಹಣವನ್ನು ಸಂಸ್ಥೆ ಸಂಗ್ರಹಿಸಿ ಕಾರ್ಯಕ್ರಮ ಆಯೋಜಿಸಬೇಕು. ಕಲಾವಿದರಿಗೂ ನೇರವಾಗಿ ಆರ್‌ಟಿಜಿಎಸ್ ಮೂಲಕ ಈ ಹಣ ಪಾವತಿಸಬೇಕು.
ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಮಾತನಾಡಿದ್ದು, ಇಲಾಖೆ ಕೊಟ್ಟ ಅನುದಾನ ಬಳಸಿ ಸಂಘ ಸಂಸ್ಥೆಗಳು ಆನ್‌ಲೈನ್ ಕಾರ್ಯಕ್ರಮ ಮಾಡಬಹುದು. ಈ ಬಗ್ಗೆ ಅಧಿಕೃತ ಆದೇಶ ಬರಲಿದೆ. ಇಲಾಖೆ ಕೂಡ ಆನ್‌ಲೈನ್ ಕಾರ್ಯಕ್ರಮ ನಡೆಸುತ್ತಿದೆ. ಕಲಾವಿದರೂ ಆನ್‌ಲೈನ್ ಕಾರ್ಯಕ್ರಮ ನಡೆಸಿದರೆ ಇಲಾಖೆ ನೆರವಾಗುವ ಚಿಂತನೆ ನಡೆಸಿದೆ ಎಂದರು.