ಶಿರಸಿ: ಕಸಗಳೇ ನಮ್ಮನ್ನು ಸ್ವಾಗತಿಸುವುದು ಒಳ್ಳೆಯ ಲಕ್ಷಣವಲ್ಲ. ನಗರಸಭೆ ಶಿರಸಿ ನಗರ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಕಾರ್ಯವನ್ನು ನಿರ್ವಹಿಸುತ್ತಿದೆ. ಆದರೆ ಕೆಲವು ಅನಾಗರಿಕರಿಂದಾಗಿ ನಗರದ ಹೊರ ವಲಯ ಕಸದಿಂದ ತುಂಬುತ್ತಿದೆ. ಆದ್ದರಿಂದ ಅದನ್ನು ಸ್ವಚ್ಛಗೊಳಿಸಲು ಶಿರಸಿ ಜೀವ ಜಲ ಕಾರ್ಯಪಡೆ ಇನ್ನೊಂದು ಹೆಜ್ಜೆ ಮುಂದಾಗಿದ್ದು, ಅದನ್ನು ಎತ್ತಿ ಸ್ವಚ್ಛಗೊಳಿಸುವ ಸಲುವಾಗಿ ನೂತನ ಟ್ರ್ಯಾಕ್ಟರ್ ಸೇವೆಯನ್ನು ಶುಕ್ರವಾರದಿಂದ ಆರಂಭಿಸಲಾಗಿದೆ ಎಂದು ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು.
ನಗರದ ಹೊರ ವಲಯದ ಕಸ ನಿರ್ವಹಣೆಗೆ ನೂತನ ಟ್ರಾಕ್ಟರ್ ಸೇವೆ ಒದಗಿಸಿದ ಅವರು ನಗರದ ಹೊರ ಪ್ರದೇಶದಲ್ಲಿ ಸಾರ್ವಜನಿಕರು ಎಸೆಯುವ ಕಸ ಸಂಗ್ರಹಣೆ, ವಿಲೇವಾರಿ ಯಾರಿಂದಲೂ ಆಗುತ್ತಿಲ್ಲ. ವಾಸ್ತವ ಎಂದರೆ, ನಗರದ ಪರೀಧಿ ಆಚೆ ಕಸ ಎಸೆಯುವವರೂ ನಗರ ವಾಸಿಗಳೇ. ಇದರಿಂದ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಕಾಲೇಜು ರಸ್ತೆ ಸೇರಿದಂತೆ ವಿವಿಧೆಡೆ ಎಸೆಯಲಾಗಿದ್ದ ಕಸವನ್ನು ಸಂಗ್ರಹಿಸಿ ಈ ಪ್ರದೇಶವನ್ನು ಸ್ವಚ್ಛಗೊಳಿಸಿದೆ. ಇನ್ನು ಮುಂದೆ ಇನ್ನಿತರ ರಸ್ತೆಗಳ ನಗರದ ಹೊರ ಪ್ರದೇಶವನ್ನು ಸ್ವಚ್ಛವಾಗಿಡುವ ಕಾರ್ಯವನ್ನು ಕಾರ್ಯಪಡೆ ಮಾಡಲು ನಿರ್ಧರಿಸಿದೆ. ನಗರದ ಹೊರ ವರ್ತುಲದ ಸ್ವಚ್ಛತೆ ಕೇವಲ ನಗರಸಭೆ ಅಥವಾ ಕಾರ್ಯಪಡೆ ಜವಾಬ್ದಾರಿಯಲ್ಲ. ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ನಾವು ಸ್ವಚ್ಛಗೊಳಿಸಿದ ಪ್ರದೇಶದಲ್ಲಿಯೇ ಮತ್ತೆ ಕಸ ಬೀಳುವಂತಾದರೆ ಪ್ರಯತ್ನ ಯಶಸ್ವಿಯಾಗುವುದಿಲ್ಲ. ನಗರದ ಜನತೆಯ ಆರೋಗ್ಯ ಕಾಪಾಡಿಕೊಳ್ಳಲು ಕಸವನ್ನು ಎಲ್ಲೆಂದರಲ್ಲಿ ಎಸೆಯುವಂತಾಗಬಾರದು ಎಂದರು.
ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿ, “ಮಾದರಿ ನಗರ ಎಂದು ಗುರುತಿಸಿಕೊಂಡಿರುವ ಜೈಪುರದ ಸ್ವಚ್ಛತೆಯ ಹಿಂದೆ ಒಬ್ಬ ಐಎಎಸ್ ಅಧಿಕಾರಿಯ ಶ್ರಮವಿದೆ. ಅಧಿಕಾರಿಗಳು ಕಾಳಜಿ ವಹಿಸಿದರೆ ಮಾದರಿ ನಗರವಾಗಿಸಬಹುದು ಎಂಬುದಕ್ಕೆ ಈ ನಗರ ನಿದರ್ಶನ. ಸರ್ಕಾರ, ಸ್ಥಳೀಯ ಆಡಳಿತ ಮಾಡಬೇಕಿದ್ದ ಜವಾಬ್ದಾರಿ ಕಾರ್ಯವನ್ನು ಜೀವಜಲ ಕಾರ್ಯಪಡೆ ಮಾಡುತ್ತಿದೆ. ಸಂಘ ಸಂಸ್ಥೆಗಳು ಸಾಮಾಜಿಕ ಕೆಲಸಕ್ಕೆ ಮುಂದಾದಾಗ ಅಧಿಕಾರಿಗಳು ಮುಂದೆ ನಿಂತು ತಮ್ಮ ಕಾಳಜಿ ತೋರವುದು ಅತ್ಯಗತ್ಯ. ನಗರದ ಸ್ವಚ್ಛತೆಗೆ ಸಾರ್ವಜನಿಕರೂ ತಮ್ಮ ಜವಾಬ್ದಾರಿ ಅರಿಯಬೇಕು. ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂಬ ಧೋರಣೆ ಎಂದಿಗೂ ಬೇಡ. ಶಿರಸಿ ಜೀವ ಜಲ ಕಾರ್ಯಪಡೆ ಇಡೀ ಜಿಲ್ಲೆಗೆ ಮಾದರಿಯಾಗುವ ಕಾರ್ಯ ನಡೆಸುತ್ತಿದೆ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ನಗರದ ಸ್ವಚ್ಛತೆಗೆ ನಗರಸಭೆ ಕೈಗೊಂಡಿರುವ ಕಾರ್ಯಗಳ ಬಗ್ಗೆ ವಿವರಿಸಿದರು. ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸಮಾಜದ ಪ್ರಮುಖರಾದ ವಿ. ಪಿ. ಹೆಗಡೆ ವೈಶಾಲಿ ಇತರರಿದ್ದರು.
ಎಸಿ ಆಕೃತಿ ಬನ್ಸಾಲ್ ಅನುಪಸ್ಥಿತಿ: ಜೀವಜಲ ಕಾರ್ಯಪಡೆ ಆರಂಭಿಸುತ್ತಿರುವ ಕಸ ಎತ್ತುವ ಟ್ರ್ಯಾಕ್ಟರ್‌ನ್ನು ಸಹಾಕಯ ಆಯುಕ್ತೆ ಆಕೃತಿ ಬನ್ಸಾಲ್ ಉದ್ಘಾಟಿಸಬೇಕಿತ್ತು. ಆದರೆ, ಅವರೇ ಗೈರಾಗಿದ್ದುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು. ನಗರದ ಹೊರ ವಲಯಗಳ ಸ್ವಚ್ಛತೆಗೆ ಅವರೇ ಕಾರ್ಯ ಯೋಜನೆ ಹಮ್ಮಿಕೊಳ್ಳಬೇಕಿತ್ತು. ಆದರೆ, ಉದ್ಘಾಟನೆಗೂ ಆಗಮಿಸದಿದ್ದರೆ ಸಾರ್ವಜನಿಕರ ಕುಂದು ಕೊರತೆಗಳು ಅಧಿಕಾರಿಗಳಿಗೆ ತಿಳಿಯುವುದಾದರೂ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂತು.