ಶಿರಸಿ: ಕರೋನಾ ಹಿನ್ನೆಲೆಯಲ್ಲಿ ತಾಲೂಕಿನ ಅಗಸಾಲ- ಬೊಮ್ಮನಳ್ಳಿಯ ಗ್ರಾಮ ಅರಣ್ಯ ಸಮಿತಿ ಆಶ್ರಯದಲ್ಲಿ ಇಂದು ಪರಿಸರ ಭವನ ಉದ್ಘಾಟನೆ ಕಾರ್ಯಕ್ರಮ ಸರಳ ಪೂಜೆ, ವೃಕ್ಷಾರೋಪಣ ನಡೆಸಿ ಪರಿಸರ ಭವನ ಪ್ರವೇಶ ಕಾರ್ಯಕ್ರಮ ನಡೆಯಿತು.
ಹಸಿರು ಸಮಾರಂಭಕ್ಕೆ ಚಾಲನೆ ನೀಡಿದ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ ರಾಜ್ಯದ ಮಾದರಿ ಗ್ರಾಮ ಅರಣ್ಯ ಸಮಿತಿ(V.F.C) ಗಳಲ್ಲಿ ಒಂದಾದ ಅಗಸಾಲ ಬೊಮ್ಮನಳ್ಳಿ ಅರಣ್ಯ ಸಮಿತಿಗೆ ಇಂದು ಸೂರು-ನೆಲೆ ಸಿಕ್ಕಿದೆ. ಪರಿಸರ ಭವನದಲ್ಲಿ ವ್ಯಾಯಾಮ ಶಾಲೆ, ವಾಚನಾಲಯ ಇದೆ. ಇಲ್ಲಿ ಗ್ರಾಮದ ಹಲವು ಸಾಮಾಜಿಕ, ಸಾಂಸ್ಕೃತಿಕ ಪರಿಸರ ಚಟುವಟಿಕೆಗಳು ನಡೆಯಲಿ. ಗ್ರಾಮ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡಿರುವ ಇಲ್ಲಿನ V.F.C ನಿರಂತರವಾಗಿ ಬಲವಾಗಿ ವರ್ಧಿಸಲಿ ಎಂದು ಶುಭ ಹಾರೈಸಿದರು.
ಶಿರಸಿ ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ ಕೈಲಾಸಗುಡ್ಡ ಸಂರಕ್ಷಣೆಗಾಗಿ ಗುಡ್ಡದಲ್ಲೇ 2006 ರಲ್ಲಿ ಜನ್ಮ ತಾಳಿದ ಅಗ್ಸಾಲ ಬೊಮ್ಮನಳ್ಳಿ ವಿ.ಎಪ್.ಸಿ. ವಿಶ್ವನಾಥ ಬುಗಡಿಮನೆ ಅವರ ನೇತೃತ್ವದಲ್ಲಿ ಹಸಿರು ಸೇನೆಯಾಗಿ ಕೆಲಸ ಮಾಡಿದೆ. ಅರಣ್ಯ ಇಲಾಖೆಗೆ ಬಹಳ ಸಹಾಯ ಮಾಡಿದೆ. ಪಾಲಿಸಿದರೆ ಪಾಲು ಅನುದಾನದಲ್ಲಿ ಪರಿಸರದ ಭವನ ಇದೀಗ ನಿರ್ಮಾಣವಾಗಿದೆ. ಈ ಪ್ರದೇಶದ ಅರಣ್ಯ ನಿರ್ಮಾಣವಾಗಿದೆ. ಈ ಪ್ರದೇಶದ ಅರಣ್ಯ ರಕ್ಷಣೆಗೆ ವಿ.ಎಫ್.ಸಿ ಕೊಡಗೆ ಇದೆ” ಎಂದರು.
ಭೈರುಂಬೆ ಶಾರದಾಂಬಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ ಪರಿಸರ ಕುಟೀರ ಮಾದರಿಯಲ್ಲಿ ನಿರ್ಮಾಣವಾಗಿದೆ. 25 ವರ್ಷ ಹಿಂದೆ ಶಾಲಾವನ ನಿರ್ಮಿಸಿದ್ದನ್ನು ನೆನಪಿಸಿದರು. ವಿ.ಎಫ್.ಸಿ ಅಧ್ಯಕ್ಷ ವಿಶ್ವನಾಥ ಅವರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಈವರೆಗೆ ವಿ.ಎಫ್.ಸಿ ಕಾರ್ಯದರ್ಶಿ ಆಗಿದ್ದ ಉಪವಲಯ ಅಧಿಕಾರಿ ರಾಠೋಡ ಇವರಿಗೆ ಬೇರೆಡೆ ವರ್ಗವಾಗಿದ್ದು, ಈ ಸಂದರ್ಭದಲ್ಲಿ ಬೀಳ್ಕೋಡುಗೆ ನೀಡಲಾಯಿತು.
ಎ.ಸಿ.ಎಫ್ ಅಶೋಕ, ವಲಯ ಅಧಿಕಾರಿ ಬಸವರಾಜ್, ತಾರಗೋಡ, ಸಹಕಾರಿ ಸಂಘದ ಅಧ್ಯಕ್ಷ ಡಿ.ಎಸ್. ಹೆಗಡೆ, ಪಂಚಾಯತ ಸದಸ್ಯ ಪ್ರಕಾಶ ಹೆಗಡೆ ಪಾಲ್ಗೊಂಡರು. ಸುಮಾ ಹೆಗಡೆ ಪ್ರಾರ್ಥಿಸಿ, ಸ್ವಾಗತಿಸಿದರು. ಶ್ರೀಕಾಂತ ಹೆಗಡೆ ವಂದನೆ ಹೇಳಿದರು.
15 ವರ್ಷಗಳಿಂದ ನಡೆಸಿರುವ ವಿ.ಎಫ್.ಸಿ ಕಾರ್ಯ ಚಟುವಟಿಕೆಗಳ ಫೋಟೋ ಪ್ರದರ್ಶಿನಿ ಏರ್ಪಡಿಸಲಾಗಿತ್ತು. ವಿ.ಎಫ್.ಸಿಯ ಸೋಲಾರ್ ಯೋಜನೆ, ಬೆಟ್ಟ ಅಭಿವೃದ್ಧಿ, ಜಲ ಸಂವರ್ಧನೆ, ಹಣ್ಣಿನ ಗಿಡಗಳ ವನ ನಿರ್ಮಾಣ, ಹಸಿರುವ ಆರೋಗ್ಯ ಶಿಬಿರಗಳು ಸೇರಿದಂತೆ ಚಿತ್ರ ಪ್ರದರ್ಶಿನ ಗಮನ ಸೆಳೆಯಿತು.