ಯಲ್ಲಾಪುರ: ತಾಲೂಕಿನಲ್ಲಿ ಕಳೆದ ತಿಂಗಳು ಉಂಟಾದ ಅತಿವೃಷ್ಟಿಯ ಕಾರಣದಿಂದಾಗಿ ಗ್ರಾಮೀಣ ಪ್ರದೇಶದ ರೈತರು ಹೈರಾಣಾಗಿದ್ದಾರೆ. ಇದೀಗ ಅಡಕೆಗೆ ಕೊಳೆರೋಗ ವ್ಯಾಪಿಸಿದ್ದು, ರೈತರಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಹಳ್ಳ, ಹೊಳೆಗಳ ನೀರು ಗದ್ದೆ, ತೋಟಗಳಿಗೆ ನುಗ್ಗಿ ಪ್ರತಿಯೊಂದು ರೈತರೂ ಒಂದಿಲ್ಲೊಂದು ದೃಷ್ಟಿಯಿಂದ ನಷ್ಟ ಅನುಭವಿಸಿದ್ದಾರೆ. ಮಳೆಯ ಅನಾಹುತಗಳಿಂದ ಉಂಟಾಗಿರುವ ಶಾಕ್ ನಿಂದ ಹೊರಬರುವ ಮುನ್ನವೇ ಅಡಕೆ ತೋಟಗಳಲ್ಲಿ ಕೊಳೆ ರೋಗ ಆವರಿಸುದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಮಳೆ ಇಳಿಮುಖವಾದರೂ, ಬಿಟ್ಟು ಬಿಟ್ಟು ಮಳೆ ಆಗಾಗ ಸುರಿಯುತ್ತಿದ್ದು, ಕೊಳೆರೋಗ ಹೆಚ್ಚಲು ಕಾರಣವಾಗಿದೆ.
ಕಳೆದ ಬೇಸಿಗೆಯಿಂದಲೇ ಮಳೆ ಆಗಾಗ ಸುರಿಯುತ್ತಿದ್ದು, ಮಳೆಗಾಲದ ಆರಂಭದಲ್ಲೂ ಮಳೆ ಅಬ್ಬರಿಸಿ, ನಂತರ ಕೆಲವು ದಿವಸದ ಬಿಡುವು ನೀಡಿತ್ತು. ಜುಲೈ ಮೂರನೇಯ ವಾರದಲ್ಲಿ ಭಾರಿ ಪ್ರಮಾಣದಲ್ಲಿ ಸುರಿದು ಅವಾಂತರ ಸೃಷ್ಟಿಸಿತ್ತು. ಅದಾಗಿ ವಾರದೊಳಗೆ ಗ್ರಾಮೀಣ ಭಾಗಗಳಾದ ವಜ್ರಳ್ಳಿ, ಚಂದಗುಳಿ, ಆನಗೋಡ, ದೇಹಳ್ಳಿ, ನಂದೊಳ್ಳಿ, ಮಾಗೋಡ, ಮಲವಳ್ಳಿ ಸೇರಿದಂತೆ ಹಲವೆಡೆ ಕೊಳೆರೋಗ ಆವರಿಸಿದೆ.
ಕಳೆದ ವರ್ಷ ಅಷ್ಟಾಗಿ ಕಾಣಿಸಿಕೊಳ್ಳದ ಕೊಳೆ, ಈ ಬಾರಿ ನಿರಂತರ ಮಳೆಯ ಕಾರಣ ಕಾಣಿಸಿಕೊಂಡಿದೆ. ದಿನೇ ದಿನೇ ವ್ಯಾಪಕವಾಗಿ ಎಳೆ ಅಡಕೆಗಳು ನೆಲಕಚ್ಚುತ್ತಿದೆ. ಬಹುತೇಕ ಭಾಗಗಳಲ್ಲಿ ಈಗಾಗಲೇ ಎರಡು ಬಾರಿ ಔಷಧಿ ಸಿಂಪಡಿಸಿದ್ದು, ತಿಂಗಳಾಗುವ ಮುನ್ನವೇ ಕೊಳೆಯ ಕಾರಣದಿಂದ ಮತ್ತೆ ಔಷಧಿ ಸಿಂಪಡಿಸಲು ಮುಂದಾಗಿದ್ದಾರೆ. ಆಗಾಗ ಸುರಿಯುತ್ತಿರುವ ಮಳೆ ಔಷಧಿ ಸಿಂಪಡಿಸಲು ಅಡ್ಡಿಯಾಗುತ್ತಿದೆ.
ತಾಲೂಕಿನಲ್ಲಿ ಅಡಕೆ ಬೆಳೆಯೊಂದನ್ನೇ ಬಹುಪಾಲು ರೈತರು ಅವಲಂಬಿಸಿದ್ದು, ಕೊಳೆಯಿಂದಾಗಿ ಅಡಕೆ ಉದುರುತ್ತಿರುವುದರಿಂದ ಮುಂದೇನು ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಸಂಕಷ್ಟದಲ್ಲಿರುವ ರೈತಾಪಿ ವರ್ಗ ದವರ ನೆರವಿಗೆ ಸರ್ಕಾರ ಮುಂದಾಗಬೇಕಿದೆ. ವಿಶೇಷ ಪ್ಯಾಕೇಜ್ ಅಥವಾ ಯೋಜನೆಯ ಮೂಲಕ ಸರ್ಕಾರ ರೈತರ ನೆರವಿಗೆ ಬರಬೇಕೆಂಬ ಆಗ್ರಹ ಕೇಳಿ ಬಂದಿದೆ.