ಶಿರಸಿ: ಗುರುವಾರದಿಂದ 15 ದಿನಗಳ ಕಾಲ ರಾಜ್ಯದಾದ್ಯಂತ ನಂದಿನಿ ಸಿಹಿ ಉತ್ಸವ ನಡೆಯಲಿದ್ದು, ನಗರದ ನಂದಿನಿ ಉತ್ಪನ್ನಗಳ ಅಧಿಕೃತ ವಿತರಕರಾದ ಅರುಣ ಎಂಟರ್ಪ್ರೈಸಸ್ ನಲ್ಲಿ ಡಿಎಸ್ಪಿ ರವಿ ನಾಯಕ ಉತ್ಸವಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಂದಿನಿ ತನ್ನ ವೈವಿಧ್ಯಮಯ ಉತ್ಪನ್ನಗಳ ಮೂಲಕ ಜನತೆಯ ಅಚ್ಚುಮೆಚ್ಚಿನದ್ದಾಗಿದೆ. ಜೊತೆಗೆ ಅರುಣ ಎಂಟರ್ಪ್ರೈಸಸ್ ಮಾಲೀಕ ಗಜಾನನ ಹೆಗಡೆ ಸಹ, ಕೊವಿಡ್ ಸಮಯದಲ್ಲಿ ನಂದಿನಿ ಹಾಲು ಮತ್ತು ಉಪ ಉತ್ಪನ್ನಗಳನ್ನು ಉಚಿತವಾಗಿ ನೀಡುವುದರ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಸಮಾಜ ಸಂಕಷ್ಟದಲ್ಲಿದ್ದಾಗ ಸ್ಪಂದಿಸುವುದು ಮಾದರಿ ನಡೆ ಎಂದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಕೆಶಿನ್ಮನೆ ಮಾತನಾಡಿ, ನಂದಿನಿ ಸಿಹಿ ಉತ್ಸವವನ್ನು ಜಿಲ್ಲೆಯಾದ್ಯಂತ ಇಂದಿನಿಂದ ನಡೆಸಲಾಗುತ್ತಿದೆ. ಜಿಲ್ಲೆಯ 250 ಮಾರಾಟ ಮಳಿಗೆ ಹಾಗು ತಾಲೂಕಿನಲ್ಲಿ 50 ಮಾರಾಟ ಮಳಿಗೆ ಮೂಲಕ ಹಾಲು ಮತ್ತು ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಉತ್ಸವದ ನಿಮಿತ್ತ ಸಿಹಿ ಖಾದ್ಯಗಳ ಮೇಲೆ 10% ರಿಯಾಯಿತಿ ನೀಡಲಾಗುತ್ತದೆ ಎಂದರು.
ಕೆಎಮ್ಎಫ್ ನ ನಂದಿನಿ ಬ್ರ್ಯಾಂಡಿನಡಿಯಲ್ಲಿ ಮೂರು ರೀತಿಯ ಹಾಲು ಮತ್ತು 32 ವಿವಿಧ ಸಿಹಿ ಉತ್ಪನ್ನಗಳು ಲಭ್ಯವಿದೆ. ಪ್ರಸ್ತುತ ಕರೋನಾ ಸಂದರ್ಭದಲ್ಲಿಯೂ ಸಹ ರೈತರಿಗಾಗಿ ರಿಯಾಯಿತಿ ದರದಲ್ಲಿ ಮಾರಾಟ ನಡೆಯುತ್ತಿದೆ. ಇದರಿಂದ ಒಟ್ಡೂ ರೈತರಿಗೆ ಹತ್ತು ಲಕ್ಷಕ್ಕೂ ಅಧಿಕ ಉಳಿತಾಯ ಆಗುತ್ತದೆ ಎಂದರು.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ತಿಂಗಳಿಗೆ 43,000 ಲೀ ಹಾಲು ಮಾರಾಟವಾಗುತ್ತಿದ್ದು, ತಿಂಗಳಿಗೆ ₹ 6.5 ಕೋಟಿಗಳಷ್ಡು ಸಿಹಿ ಖಾದ್ಯ ಮತ್ತು ಹಾಲಿನ ಉತ್ಪನ್ನದಿಂದ ವಹಿವಾಟಾಗುತ್ತಿದೆ. ನಂದಿನಿಯ ಉತ್ಪನ್ನಗಳ ಮಾಹಿತಿ ಜನರಿಗೆ ಹೆಚ್ಚು ಲಭಿಸಬೇಕು. ಗ್ರಾಹಕರ ಸಮೀಪಕ್ಕೆ ತೆರಳುವ ಉದ್ದೇಶದಿಂದ ನಂದಿನಿ ಸಿಹಿ ಉತ್ಸವವನ್ನು ಕಳೆದ 9 ವರ್ಷಗಳಿಂದ ನಡೆಸುತ್ತಿರುವುದಾಗಿ ಹೇಳಿದರು.
ಅಡಿಕೆ ಮಾರುಕಟ್ಟೆಯನ್ನು ಹೊರತು ಪಡಿಸಿದರೆ, ಅತಿ ಹೆಚ್ಚು ಕೃಷಿ ಮಾರಾಟದ ವ್ಯವಹಾರ ವಹಿವಾಟು ನಡೆಯುವುದು ಹೈನುಗಾರಿಕೆಯ ಮೂಲಕ ಹಾಲು ಮತ್ತು ಸಂಬಂಧಿತ ಉತ್ಪನ್ನವಾಗಿದೆ. ಇದರಿಂದ ಜಿಲ್ಲೆಯ ರೈತರಿಗೆ ನೇರ ಪ್ರಯೋಜನ ದೊರೆಯುತ್ತಿದೆ ಎಂದರು.
ಕೆಡಿಸಿಸಿ ಉಪಾಧ್ಯಕ್ಷ ಮೋಹನದಾಸ ನಾಯಕ ಮಾತನಾಡಿ, ನಂದಿನಿ ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದೆ. ಆ ಮೂಲಕ ಜನತೆಗೆ ಹತ್ತಿರವಾಗುವ ಎಲ್ಲ ಪ್ರಯತ್ನಗಳು ನಡೆಯುತ್ತಿರುವುದು ಸಂತಸದ ವಿಚಾರ. ನಂದಿನಿಯ ಸಿಹಿ ಉತ್ಸವ ಯಶಸ್ವಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ನಂದಿನಿ ಉತ್ಪನ್ನದ ಅಧಿಕೃತ ವಿತರಕರಾದ ಅರುಣ ಎಂಟರ್ಪ್ರೈಸ್ ಮಾಲೀಕ ಗಜಾನನ ಹೆಗಡೆ, ಕೆಎಮ್ಎಫ್ ಜಿಲ್ಲಾ ಪ್ರಮುಖರಾದ ಎಸ್ ಎಸ್ ಬಿಜ್ಜೂರ್, ಮಾರ್ಕೆಟಿಂಗ್ ವಿಭಾಗದ ಅನೇಕರು ಉಪಸ್ಥಿತರಿದ್ದರು.