ಶಿರಸಿ: ಈ ಬಾರಿಯ ಗಣೇಶೋತ್ಸವ ಆಚರಣೆಯನ್ನು 2 ದಿನಕ್ಕೆ ಸೀಮಿತಗೊಳಿಸಲಾಗಿದೆ. ಸರ್ಕಾರ ಆದೇಶ ನೀಡಿದಂತೆ ಸರಳವಾಗಿ ಮನೆ ಹಾಘೂ ದೇವಸ್ಥಾನದಲ್ಲಿ ಮಾತ್ರ ಆಚರಣೆ ಮಾಡಬೇಕು. ಸಾರ್ವಜನಿಕ ಸ್ಥಳ, ಮೈದಾನ, ಸಮುದಾಯ ಭವನಗಳಲ್ಲಿ ಪ್ರತಿಷ್ಟಾಪಿಸಲು ಅವಕಾಶವಿಲ್ಲ ಎಂದು ತಹಶೀಲ್ದಾರ ಎಂ.ಆರ್ ಕುಲಕರ್ಣಿ ಸೂಚನೆ ನೀಡಿದ್ದಾರೆ.
ಗಣೇಶ ಚತುರ್ಥಿ ಆಚರಣೆ ಹಿನ್ನೆಲೆಯಲ್ಲಿ ನಗರದ ಮಿನಿ ವಿಧಾನಸೌಧದಲ್ಲಿ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರ ಜೊತೆ ಸಭೆ ನಡೆಸಿ ಮಾತನಾಡಿದರು. ಕೋವಿಡ್ 3ನೇ ಅಲೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೆಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಸೇರಿದಂತೆ ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಹಬ್ಬಗಳ ಆಚರಣೆ ನಿಯಂತ್ರಣ ಪೂರ್ವಕವಾಗಿ ಆಚರಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ ಎಂದರು.
ತಹಶೀಲ್ದಾರ್ ಮಾತಿಗೆ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳಿಂದ ವಿರೋಧ ವ್ಯಕ್ತವಾಯಿತು. ಕಳೆದ ಬಾರಿ ಕೊಲೊನಾ ಹೆಚ್ಚಾಗಿದ್ದ ಸಂದರ್ಭದಲ್ಲಿ ಕೂಡಾ ಸಮುದಾಯ ಭವನದಲ್ಲಿ ಗಣೇಶ ಮೂರ್ತಿ ಕೂರಿಸಲು ಅವಕಾಶ ನೀಡಲಾಗಿತ್ತು. ಈ ಬಾರಿಯೂ ಅವಕಾಶ ನೀಡಬೇಕೆಂದರು ಹೇಳಿದರು.
ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವವರು ಬಾವಿಯಲ್ಲಿ ಇಲ್ಲವೇ ಟ್ಯಾಂಕ್‍ನಲ್ಲಿ, ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ಗಣಪತಿಯನ್ನು ಹತ್ತಿರದ ಕೆರೆಯಲ್ಲಿ ವಿಸರ್ಜನೆ ಮಾಡಬೇಕು. ಆದರೆ, ಮೆರವಣಿಗೆ ನಿಷೇಧಿಸಲಾಗಿದೆ. ದೇವಸ್ಥಾನದಲ್ಲಿಡುವ ಸಾರ್ವಜನಿಕ ಗಣಪತಿ ಸಮಿತಿಯವರು ಸಾರ್ವಜನಿಕರಿಗಾಗಿ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಟೀನಿಂಗ್ ವ್ಯವಸ್ಥೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡುವಂತೆ ನೋಡಿಕೊಳ್ಳಬೇಕು ಮತ್ತು ಮೂರ್ತಿ ಪ್ರತಿಷ್ಠಾಪನೆ ಜಾಗದಲ್ಲಿ ದಿನನಿತ್ಯ ಸ್ಯಾನಿಟೈಸರ್ ಮಾಡುವ ವ್ಯವಸ್ಥೆ ಮಾಡಬೇಕೆಂದು ಹೇಳಿದರು.
ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಮಾತನಾಡಿ, ಗಣೇಶನ ಹಬ್ಬದಲ್ಲಿ ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿರುತ್ತದೆ. ಕಾರ್ಯಾಚರಣೆ ಸಂದರ್ಭದಲ್ಲಿ ತಾಲೂಕಾಡಳಿತ ದಂಡ ಹಾಕಿದರೆ ಸಮಿತಿಯವರು, ಸಾರ್ವಜನಿಕರು ಸಹಕಾರ ನೀಡಬೇಕು. ನಾವು ಯಾವ ಕ್ರಮ ಕೈಗೊಂಡರು ಅದರಲ್ಲಿ ಸಾರ್ವಜನಿಕರ ಹಿತ ಅಡಗಿರುವುದರಿಂದ ಜನರು ಎಲ್ಲವನ್ನೂ ಅರಿತು ಸಾಗಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಪೌರಾಯುಕ್ತ ಕೇಶವ ಚೌಗುಲೆ, ಸಿಪಿಆಯ್ ರಾಮಚಂದ್ರ ನಾಯಕ ಹಾಗು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.