ಶಿರಸಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ವ್ಯಾಪ್ತಿಯ ಬಸ್ಸು ಮತ್ತು ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಮತ್ತು ಪ್ರಯಾಣಿಕರಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನದ ಅಂಗವಾಗಿ ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಎಲೆ, ಅಡಿಕೆ, ಗುಟ್ಕಾ, ಧೂಮಪಾನ ಸೇವನೆ ನಿಷೇಧಿಸಲಾಗಿದೆ.
ಈ ನಿಯವಮನ್ನು ಉಲ್ಲಂಘಿಸುವವರ ಮೇಲೆ ದಂಡ ವಿಧಿಸಲಾಗುತ್ತಿದೆ. ಜುಲೈ-2021 ಮಾಹೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳಲ್ಲಿ ಒಟ್ಟು ರೂ. 55,000 ಮೊತ್ತದ ದಂಡವನ್ನು ವಿಧಿಸಲಾಗಿದೆ. ಪರಿಣಾಮಕಾರಿ ಜಾಗೃತಿಗಾಗಿ ಪ್ರಯಾಣಿಕರ ಟಿಕೇಟ್ ಗಳ ಮೇಲೆ ಸಹ ಮುದ್ರಿತ ಸಂದೇಶ ಬರುವಂತೆ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರು, ಪ್ರಯಾಣಿಕರು ಬಸ್ಸುಗಳು ಮತ್ತು ಬಸ್ಸು ನಿಲ್ದಾಣಗಳ ಸ್ವಚ್ಛತೆಯ ದೃಷ್ಟಿಯಿಂದ ಸಂಸ್ಥೆಯ ಜೊತೆ ಸಹಕರಿಸಬೇಕೆಂದು ವಾಕರಸಾ.ಸಂಸ್ಥೆ, ಹುಬ್ಬಳ್ಳಿ ಕೇಂದ್ರ ಕಚೇರಿ ಮುಖ್ಯ ಸಂಚಾರ ವ್ಯವಸ್ಥಾಪಕ ಕೋರಿದ್ದಾರೆ.