ಶಿರಸಿ: ತಾಲೂಕಿನ ಗೌಡಳ್ಳಿ ಬಳಿಯ ಖಾನ್ ನಗರದ ಬಸ್ ನಿಲ್ದಾಣದಲ್ಲಿ ನವಜಾತ ಶಿಶುವನ್ನು ಚೀಲದಲ್ಲಿ ಸುತ್ತಿ ಬಿಟ್ಟು ಹೋಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತುರ್ತು ನಿಗಾ ಘಟಕದಲ್ಲಿ (ಎನ್.ಐ.ಸಿ.ಯು.) ಚಿಕಿತ್ಸೆ ನೀಡಿ, ಆರೈಕೆ ಮಾಡಲಾಗುತ್ತಿದೆ.
ಖಾನ್ ನಗರದ ಬಸ್ ನಿಲ್ದಾಣದಲ್ಲಿ ಈ ನವಜಾತ ಗಂಡು ಶಿಶು ಕೂಗಿಲಕುಳಿ ಗ್ರಾಮದ ಮಹಿಳೆಯೊಬ್ಬರಿಗೆ ಈ ಮಗು ದೊರೆತಿದೆ. ಅದನ್ನು ಶಿರಸಿಯ ಸಹಾಯ ಟ್ರಸ್ಟ್‍ಗೆ ಹಸ್ತಾಂತರಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷ ಸತೀಶ ಶೆಟ್ಟಿ ಅನಾರೋಗ್ಯಕ್ಕೆ ತುತ್ತಾಗಿರುವ ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
‘ಕೂಲಿ ಕೆಲಸಕ್ಕೆ ಹೋಗುವಾಗ ತಂಗುದಾಣದಲ್ಲಿ ಮಗುವಿನ ಅಳು ಕೇಳಿಸಿತು. ಹತ್ತಿರ ತೆರಳಿ ನೋಡಿದಾಗ ಚೀಲವೊಂದರಲ್ಲಿ ಮಗುವನ್ನು ಸುತ್ತಿ ಬಿಟ್ಟು ಹೋಗಿದ್ದು ಗಮನಕ್ಕೆ ಬಂತು’ ಎಂದು ಮಗು ರಕ್ಷಿಸಿದ ಮಹಿಳೆ ಮಾದೇವಿ ತಿಳಿಸಿದರು.
‘ಅವಧಿಪೂರ್ವ ಜನಿಸಿದ ಶಿಶು ಇದಾಗಿದ್ದು 1.6 ಕೆಜಿ ತೂಕ ಹೊಂದಿದ್ದು, ನಾಲ್ಕೈದು ದಿನದ ಹಿಂದೆ ಜನಿಸಿರಬಹುದೆಂದು ಅಂದಾಜಿಸಿದೆ. ಎಡಗೈ ಮುಂಭಾಗದ ಮೂಳೆ ಬೆಳವಣಿಗೆ ಆಗಿಲ್ಲ. ಗಾಳಿ, ಮಳೆಯ ವಾತಾವರಣದಲ್ಲಿದ್ದ ಕಾರಣ ಮಗುವಿನ ಆರೋಗ್ಯ ಹದಗೆಟ್ಟಿದೆ. ಚಿಕಿತ್ಸೆ ನೀಡುತ್ತಿದ್ದು ತಕ್ಷಣವೇ ಅದರ ಆರೋಗ್ಯ ಸ್ಥಿತಿ ಸುಧಾರಣೆ ಬಗ್ಗೆ ಹೇಳಲಾಗದು’ ಎಂದು ಮಕ್ಕಳ ತಜ್ಞ ಡಾ.ಆಶ್ರಿತ್ ಭಟ್ ತಿಳಿಸಿದ್ದಾರೆ.
‘ಮಗುವನ್ನು ಬಿಟ್ಟು ಹೋಗಿರುವವರ ಪತ್ತೆಗೆ ಕ್ರಮವಹಿಸಲಾಗುವುದು. ಸದ್ಯ ಮಗುವಿನ ಆರೋಗ್ಯ ಸುಧಾರಣೆಗೆ ಲಕ್ಷ್ಯ ವಹಿಸಿದ್ದೇವೆ’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ ಭಟ್ಟ ತಿಳಿಸಿದ್ದಾರೆ.